ಚಾಂಪಿಯನ್ಸ್ ಟ್ರೋಫಿಯ ಸಿದ್ಧತೆ ಪರಿಶೀಲನೆಗೆ ಪಾಕಿಸ್ತಾನಕ್ಕೆ ತೆರಳಲಿದೆ ಐಸಿಸಿ ನಿಯೋಗ
PC : ICC
ಹೊಸದಿಲ್ಲಿ : ಚಾಂಪಿಯನ್ಸ್ ಟ್ರೋಫಿಯ ಸಿದ್ಧತೆಗಳನ್ನು ಪರಿಶೀಲಿಸಲು ಐಸಿಸಿ ನಿಯೋಗವೊಂದು ಈ ತಿಂಗಳು ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ. ಈ ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಚಾಂಪಿಯನ್ಸ್ ಟ್ರೋಫಿಯ ತಾತ್ಕಾಲಿಕ ವೇಳಾಪಟ್ಟಿಯ ಕುರಿತು ಚರ್ಚಿಸಲಿದೆ ಎಂದು ವರದಿಯಾಗಿದೆ.
ಎಷ್ಟು ಮಂದಿ ಐಸಿಸಿ ಅಧಿಕಾರಿಗಳು ಪಾಕಿಸ್ತಾನಕ್ಕೆ ಆಗಮಿಸಲಿದ್ದಾರೆ ಎಂದು ಪಿಸಿಬಿ ತಿಳಿಸಿಲ್ಲ. ಭೇಟಿಯ ವೇಳೆ ವೇಳಾಪಟ್ಟಿ ಚರ್ಚೆಯ ಕೇಂದ್ರಬಿಂದುವಾಗಿದೆ ಎಂದು ನಿರೀಕ್ಷಿಸಲಾಗಿದೆ.
ಇದಕ್ಕೂ ಮುನ್ನ ಪಿಸಿಬಿ ತಾತ್ಕಾಲಿಕ ವೇಳಾಪಟ್ಟಿಯನ್ನು ಐಸಿಸಿಗೆ ಕಳುಹಿಸಿತ್ತು. ಈ ಪ್ರಸ್ತಾವನೆಯಲ್ಲಿ ಲಾಹೋರ್ ಅನ್ನು ಭಾರತ ತಂಡಕ್ಕೆ ಸೂಕ್ತ ಎಂದು ಸಲಹೆ ನೀಡಲಾಗಿತ್ತು.
ಈ ವೇಳಾಪಟ್ಟಿಯನ್ನು ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಕ್ರಿಕೆಟ್ ಮಂಡಳಿಗಳು ನೋಡಿವೆ. ಅದನ್ನು ಅಂತಿಮಗೊಳಿಸುವ ಮೊದಲು ಇನ್ನೂ ಕೆಲವು ಕೆಲಸ ಆಗಬೇಕಾಗಿದೆ. ಭಾರತ ತಂಡವು ಪಾಕಿಸ್ತಾನದಲ್ಲಿ ಆಡಲು ಅದರ ಸರಕಾರ ಅನುಮತಿ ನೀಡುತ್ತದೆಯೇ ಎಂಬ ಕುರಿತು ಅಂತಿಮ ನಿರ್ಧಾರ ಕೈಗೊಳ್ಳದೆ ಇರುವುದು ವೇಳಾಪಟ್ಟಿ ಅಂತಿಮವಾಗದಿರಲು ಮುಖ್ಯ ಕಾರಣ ಎಂದು ತಿಳಿದುಬಂದಿದೆ.
ಐಸಿಸಿ ನಿಯೋಗವು ಚಾಂಪಿಯನ್ಸ್ ಟ್ರೋಫಿ ನಡೆಯುವ ಸ್ಥಳಗಳಾದ ಕರಾಚಿ, ಲಾಹೋರ್ ಹಾಗೂ ರಾವಲ್ಪಿಂಡಿಗೆ ತೆರಳಿ ಅಲ್ಲಿನ ಅಭಿವೃದ್ದಿ ಕಾರ್ಯಗಳನ್ನು ಪರಿಶೀಲಿಸಲಿದೆ. ಭದ್ರತಾ ಅಧಿಕಾರಿಗಳನ್ನು ಭೇಟಿಯಾಗಲಿದೆ. ಪ್ರಸಾರದ ವ್ಯವಸ್ಥೆಗಳು, ತಂಡದ ವಸತಿಗಳು ಹಾಗೂ ಪ್ರಯಾಣದ ಯೋಜನೆಗಳನ್ನು ಪರಿಶೀಲಿಸಲಿದೆ.