ಚಾಂಪಿಯನ್ಸ್ ಟ್ರೋಫಿ | ನಾಳೆ ದುಬೈನಲ್ಲಿ ಭಾರತ-ಪಾಕಿಸ್ತಾನ ಹಣಾಹಣಿ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ದುಬೈನಲ್ಲಿ ರವಿವಾರ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಸೆಣಸಾಡಲಿವೆ. ‘ಎ’ ಗುಂಪಿನಿಂದ ಸೆಮಿ ಫೈನಲ್ ಸ್ಥಾನ ಗಿಟ್ಟಿಸಿಕೊಳ್ಳಲು ಉಭಯ ತಂಡಗಳ ಪಾಲಿಗೆ ಈ ಪಂದ್ಯವು ಅತ್ಯಂತ ಮಹತ್ವದ್ದಾಗಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಗುರುವಾರ ಬಾಂಗ್ಲಾದೇಶ ತಂಡವನ್ನು 6 ವಿಕೆಟ್ ಗಳ ಅಂತರದಿಂದ ಮಣಿಸುವ ಮೂಲಕ ತನ್ನ ಅಭಿಯಾನ ಆರಂಭಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವು ಕರಾಚಿಯಲ್ಲಿ ಬುಧವಾರ ನಡೆದಿದ್ದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 60 ರನ್ ಅಂತರದಿಂದ ಸೋಲುಂಡಿತ್ತು.
29 ವರ್ಷಗಳ ನಂತರ ಮೊದಲ ಬಾರಿ ಐಸಿಸಿ ಟೂರ್ನಿಯೊಂದರ ಆತಿಥ್ಯವಹಿಸಿರುವ ಪಾಕಿಸ್ತಾನ ತಂಡ ಕಿವೀಸ್ ವಿರುದ್ಧ ಸೋತಿರುವ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಮುಂದಿನ ಸುತ್ತಿಗೇರಬೇಕಾದರೆ ಪವಾಡ ಮಾಡುವ ಅಗತ್ಯವಿದೆ.
ಸೆಮಿ ಫೈನಲ್ಗೇರುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಪಾಕಿಸ್ತಾನ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಈ ಪಂದ್ಯದಲ್ಲಿ ಭಾರತ ತಂಡವು ಗೆಲುವು ದಾಖಲಿಸಿದರೆ 8 ತಂಡಗಳಿರುವ ಪಂದ್ಯಾವಳಿಯಲ್ಲಿ ಅಂತಿಮ-4ರಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ.
ಉಭಯ ತಂಡಗಳು ಅಹ್ಮದಾಬಾದ್ನಲ್ಲಿ 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ನಲ್ಲಿ ಮುಖಾಮುಖಿಯಾಗಿದ್ದವು. ಆಗ ನಾಯಕ ರೋಹಿತ್ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ತಂಡವು 7 ವಿಕೆಟ್ ಗಳಿಂದ ಜಯ ಸಾಧಿಸಿತ್ತು. ಈ ಮೂಲಕ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಅಜೇಯ ದಾಖಲೆಯನ್ನು ಕಾಯ್ದುಕೊಂಡಿತ್ತು.
ಜಸ್ಪ್ರಿತ್ ಬುಮ್ರಾ, ಮುಹಮ್ಮದ್ ಸಿರಾಜ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನೊಳಗೊಂಡ ಭಾರತದ ವೇಗದ ಬೌಲಿಂಗ್ ವಿಭಾಗವು ಪಾಕಿಸ್ತಾನ ತಂಡವನ್ನು 191 ರನ್ಗೆ ನಿಯಂತ್ರಿಸಲು ನಿರ್ಣಾಯಕ ಪಾತ್ರವಹಿಸಿದರು. ಭಾರತದ ಸ್ಪಿನ್ ದ್ವಯರಾದ ಕುಲದೀಪ್ ಯಾದವ್ ಹಾಗೂ ರವೀಂದ್ರ ಜಡೇಜ ತಮ್ಮೊಳಗೆ ನಾಲ್ಕು ವಿಕೆಟ್ ಗಳನ್ನು ಹಂಚಿಕೊಂಡಿದ್ದರು.
ಆದರೆ ಟೀಮ್ ಇಂಡಿಯಾವು 2017ರಲ್ಲಿ ದಿ ಓವಲ್ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿತ್ತು. ಆಗ ಭಾರತ ತಂಡವು ತನ್ನ ಎರಡನೇ ಪ್ರಶಸ್ತಿ ಗೆಲ್ಲುವುದರಿಂದ ವಂಚಿತವಾಗಿತ್ತು.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿನ ಸೋಲನ್ನು ಹೊರತುಪಡಿಸಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಅಜೇಯ ಗೆಲುವಿನ ದಾಖಲೆ ಹೊಂದಿರುವ ಭಾರತ ತಂಡವು ಮಾನಸಿಕ ಮೇಲುಗೈ ಹೊಂದಿದೆ. ಭಾರತ ತಂಡವು 2018ರ ನಂತರ ಆರು ಏಕದಿನ ಪಂದ್ಯಗಳನ್ನು ಜಯಿಸಿದೆ.
ಎರಡೂ ತಂಡಗಳು ನ್ಯೂಯಾರ್ಕ್ ನಲ್ಲಿ ನಡೆದಿದ್ದ 2024ರ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ ಭಾರತ ತಂಡವು 9 ರನ್ನಿಂದ ರೋಚಕ ಜಯ ಸಾಧಿಸಿತ್ತು.
14 ರನ್ ಗೆ 3 ವಿಕೆಟ್ ಗಳನ್ನು ಪಡೆದಿದ್ದ ಜಸ್ಪ್ರಿತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಭಾರತ ತಂಡವು 2007ರ ನಂತರ ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
►ಉಭಯ ತಂಡಗಳ ಪ್ರಮುಖ ಆಟಗಾರರು
ರೋಹಿತ್ ಶರ್ಮಾ: ‘ಹಿಟ್ ಮ್ಯಾನ್’ ಖ್ಯಾತಿಯ ಪ್ರಮುಖ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ಬಾಂಗ್ಲಾದೇಶ ವಿರುದ್ಧ ತನ್ನ ಪವರ್-ಹಿಟ್ಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಅತಿ ಹೆಚ್ಚು ಒತ್ತಡವಿರುವ ಪಂದ್ಯಗಳಲ್ಲಿ ದಕ್ಷ ನಾಯಕತ್ವದ ಮೂಲಕ ನಿರ್ಣಾಯಕ ಪಾತ್ರವಹಿಸುತ್ತಿರುವ ರೋಹಿತ್, ವೇಗ ಹಾಗೂ ಸ್ಪಿನ್ ಬೌಲಿಂಗ್ ಎದುರು ಪ್ರಾಬಲ್ಯ ಸಾಧಿಸಿ, ಅಗ್ರ ಕ್ರಮಾಂಕದಲ್ಲಿ ಗೇಮ್ ಚೇಂಜರ್ ಆಗುವ ಗುರಿ ಇಟ್ಟುಕೊಂಡಿದ್ದಾರೆ.
ವಿರಾಟ್ ಕೊಹ್ಲಿ: ಸದಾ ಕಾಲ ರನ್ ಗಳಿಸಲು ಒತ್ತು ನೀಡುವ ಕೊಹ್ಲಿ ರನ್ ಚೇಸ್ ವೇಳೆ ಹಾಗೂ ಪ್ರಮುಖ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲರು. ಸದ್ಯ ಅವರು ಸೀಮಿತ ಓವರ್ ಕ್ರಿಕೆಟ್ನಲ್ಲಿ ಕಳಪೆ ಫಾರ್ಮ್ ನಲ್ಲಿದ್ದರೂ ಏಕದಿನ ಕ್ರಿಕೆಟಿನ ಓರ್ವ ಶ್ರೇಷ್ಠ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಬಾಬರ್ ಆಝಮ್: ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದ್ದ ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಬಾಬರ್ ಆಝಮ್ ಭಾರತದ ಬೌಲಿಂಗ್ ದಾಳಿಗೆ ಬೆದರಿಕೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಇನಿಂಗ್ಸ್ ಆಧರಿಸುವ ಅವರ ಸಾಮರ್ಥ್ಯವು ಪಾಕಿಸ್ತಾನದ ಯಶಸ್ಸಿಗೆ ನಿರ್ಣಾಯಕವಾಗಿದೆ.
ಸಲ್ಮಾನ್ ಆಘಾ: 2014ರ ನಂತರ ಸಲ್ಮಾನ್ ಆಘಾ ಪಾಕಿಸ್ತಾನದ ಭರವಸೆಯ ಆಟಗಾರನಾಗಿದ್ದಾರೆ. ಮಧ್ಯಮ ಓವರ್ ನಲ್ಲಿ 65ರ ಸರಾಸರಿಯಲ್ಲಿ ಒಟ್ಟು 325 ರನ್ ಗಳಿಸಿದ್ದಾರೆ.
ಶಾಹೀನ್ ಅಫ್ರಿದಿ: ಎಡಗೈ ವೇಗಿ ಶಾಹೀನ್, ಕಿವೀಸ್ ವಿರುದ್ಧದ ಟೂರ್ನಿಯ ಮೊದಲ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದಾರೆ. ಆದರೆ, ಹೊಸ ಚೆಂಡನ್ನು ಸ್ವಿಂಗ್ ಮಾಡುವ ಹಾಗೂ ಡೆತ್ ಓವರ್ನಲ್ಲಿ ಯಾರ್ಕರ್ ಎಸೆಯುವ ಸಾಮರ್ಥ್ಯವು ಅವರನ್ನು ಮ್ಯಾಚ್ ವಿನ್ನರ್ ಆಗಿಸಿದೆ. ಆರಂಭಿಕ ವಿಕೆಟ್ ಗಳನ್ನು ಉರುಳಿಸುವ ಸಾಮರ್ಥ್ಯವು ಯಾವುದೇ ಎದುರಾಳಿ ತಂಡಕ್ಕೆ ಹಿನ್ನಡೆ ವುಂಟು ಮಾಡಬಹುದು.
►ಟೀಮ್ ನ್ಯೂಸ್
ಗಾಯಗೊಂಡಿರುವ ಆರಂಭಿಕ ಬ್ಯಾಟರ್ ಫಖರ್ ಝಮಾನ್ ಬದಲಿಗೆ ಇಮಾಮುಲ್ಹಕ್ ತಂಡವನ್ನು ಸೇರಿದ್ದಾರೆ. ಉಸ್ಮಾನ್ ಖಾನ್ ಇನ್ನೋರ್ವ ಮೀಸಲು ಬ್ಯಾಟರ್ ಆಗಿದ್ದಾರೆ. ಭಾರತ ತಂಡವು ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.
►ಪಿಚ್ ರಿಪೋರ್ಟ್
ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಗೆ ಅವಕಾಶಗಳನ್ನು ಒದಗಿಸಲಿದೆ. ಹಗಲು-ರಾತ್ರಿ ಪಂದ್ಯಗಳಲ್ಲಿ ಪಿಚ್ ಒಣಗಿದಂತೆ ಇರಲಿದ್ದು, ಸ್ಪಿನ್ ಬೌಲರ್ಗಳು ಹೆಚ್ಚು ಪರಿಣಾಮಕಾರಿಯಾಗಬಹುದು. ಆರಂಭದಲ್ಲಿ ಪಿಚ್ ವೇಗದ ಬೌಲಿಂಗ್ ಗೆ ನೆರವಾಗಲಿದೆ. ಮಧ್ಯಮ ಓವರ್ ನಲ್ಲಿ ಸ್ಪಿನ್ ಬೌಲಿಂಗ್ ನಿರ್ಣಾಯಕವಾಗಲಿದೆ. ಹೊಸ ಚೆಂಡಿನಲ್ಲಿ ವೇಗದ ಬೌಲರ್ ಗಳು ಮೇಲುಗೈ ಸಾಧಿಸಬಹುದು. ಹಗಲು-ರಾತ್ರಿ ಪಂದ್ಯದಲ್ಲಿ ಕಾಡುವ ಇಬ್ಬನಿಯು ಟಾಸ್ ನಿರ್ಧಾರದ ಮೇಲೆ ಪರಿಣಾಮಬೀರಬಹುದು.
►ಸಂಭಾವ್ಯ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್(ವಿಕೆಟ್ಕೀಪರ್), ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಮುಹಮ್ಮದ್ ಶಮಿ, ಹರ್ಷಿತ್ ರಾಣಾ, ಕುಲದೀಪ್ ಯಾದವ್.
ಪಾಕಿಸ್ತಾನ: ಇಮಾಮುಲ್ ಹಕ್, ಬಾಬರ್ ಆಝಮ್, ಸೌದ್ ಶಕೀಲ್, ಮುಹಮ್ಮದ್ ರಿಝ್ವಾನ್(ನಾಯಕ, ವಿಕೆಟ್ಕೀಪರ್), ಆಘಾ ಸಲ್ಮಾನ್, ಕಾಮ್ರಾನ್ ಗುಲಾಮ್, ಖುಷ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಂ ಶಾ, ಹಾರಿಸ್ ರವೂಫ್, ಅಬ್ರಾರ್ ಅಹ್ಮದ್.
►ಅಂಕಿ-ಅಂಶ
*ಭಾರತ ತಂಡವು ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಏಶ್ಯಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ 11 ಏಕದಿನ ಪಂದ್ಯಗಳ ಪೈಕಿ 9ರಲ್ಲಿ ಜಯ ಸಾಧಿಸಿದೆ.
*ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಭಾರತ ವಿರುದ್ಧ 2017ರ ಫೈನಲ್ ಸಹಿತ 5 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದೆ.
* ವಿರಾಟ್ ಕೊಹ್ಲಿಗೆ ಏಕದಿನ ಕ್ರಿಕೆಟ್ನಲ್ಲಿ 14,000 ರನ್ ಗಳಿಸಿದ ಮೂರನೇ ಬ್ಯಾಟರ್ ಹಾಗೂ ವೇಗವಾಗಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲು ಕೇವಲ 15 ರನ್ ಅಗತ್ಯವಿದೆ.