ಚಾಂಪಿಯನ್ಸ್ ಟ್ರೋಫಿ: ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ ತಂಡಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಅಫ್ಘಾನಿಸ್ತಾನ ತಂಡ

ಸಾಂದರ್ಭಿಕ ಚಿತ್ರ | PC : PTI
ಲಾಹೋರ್: ಇಂಗ್ಲೆಂಡ್ ತಂಡದ ವಿರುದ್ಧ ಬುಧವಾರ ರೋಚಕ ಜಯ ಸಾಧಿಸಿ ಆಘಾತ ನೀಡಿರುವ ಅಫ್ಘಾನಿಸ್ತಾನ ತಂಡವು ‘ಬಿ’ ಗುಂಪಿನಲ್ಲಿ ಅಗ್ರ ಎರಡು ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಅಫ್ಘಾನ್ ತಂಡವು ಎರಡು ನಿರ್ಣಾಯಕ ಅಂಕವನ್ನು ಗಳಿಸುವ ಮೂಲಕ ಅಗ್ರ-2 ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ತಂಡಗಳಿಗಿಂತ ಕೇವಲ ಒಂದು ಅಂಕದಿಂದ ಹಿಂದಿದೆ.
ಲಾಹೋರ್ನ ಗದ್ದಾಫಿ ಕ್ರೀಡಾಂಗಣದಲ್ಲಿ ಶುಕ್ರವಾರ ಹಾಲಿ ಏಕದಿನ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಎದುರಿಸಲಿರುವ ಅಫ್ಘಾನ್ ತಂಡ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ.
ಟೂರ್ನಿಯಿಂದ ನಿರ್ಗಮಿಸಿರುವ ಇಂಗ್ಲೆಂಡ್ ಹಾಗೂ ಸೆಮಿ ಫೈನಲ್ ರೇಸ್ನಲ್ಲಿರುವ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕರಾಚಿಯ ನ್ಯಾಶನಲ್ ಸ್ಟೇಡಿಯಮ್ನಲ್ಲಿ ಶನಿವಾರ ನಡೆಯುವ ಪಂದ್ಯದ ಮೂಲಕ ‘ಬಿ’ ಗುಂಪಿನ ಹಣಾಹಣಿಯು ಕೊನೆಯಾಗಲಿದೆ.
ಆಸ್ಟ್ರೇಲಿಯ ಇಲ್ಲವೇ ದಕ್ಷಿಣ ಆಫ್ರಿಕಾ ತಂಡಗಳು ಸೆಮಿ ಫೈನಲ್ ತಲುಪುವಲ್ಲಿ ವಿಫಲರಾದರೆ, ರಾವಲ್ಪಿಂಡಿಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ರದ್ದಾಗಿರುವ ಪಂದ್ಯವನ್ನು ದೂಷಿಸಬೇಕಾಗುತ್ತದೆ. ರದ್ದಾಗಿರುವ ಪಂದ್ಯದಿಂದ ಉಭಯ ತಂಡಗಳು ತಲಾ ಒಂದು ಅಂಕ ಗಳಿಸಿದ್ದವು.
ಆಸ್ಟ್ರೇಲಿಯ- ಅಫ್ಘಾನಿಸ್ತಾನ:
►ಒಂದು ವೇಳೆ ಅಫ್ಘಾನಿಸ್ತಾನ ಗೆಲುವು ಸಾಧಿಸಿದರೆ: ಅಫ್ಘಾನಿಸ್ತಾನ ತಂಡವು ಜಯ ಸಾಧಿಸಿದರೆ 4 ಅಂಕದೊಂದಿಗೆ ಸೆಮಿ ಫೈನಲ್ಗೆ ಪ್ರವೇಶಿಸಲಿದೆ. ಆಸ್ಟ್ರೇಲಿಯವು 3 ಅಂಕ ಗಳಿಸಲಿದ್ದು, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ‘ಬಿ’ ಗುಂಪಿನ ಕೊನೆಯ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.
►ಒಂದೊಮ್ಮೆ ಆಸ್ಟ್ರೇಲಿಯ ಜಯ ಸಾಧಿಸಿದರೆ: ಏಕದಿನ ಚಾಂಪಿಯನ್ ಆಸ್ಟ್ರೇಲಿಯವು ಒಟ್ಟು 5 ಅಂಕ ಗಳಿಸಿ ಸೆಮಿ ಫೈನಲ್ಗೆ ಅರ್ಹತೆ ಪಡೆಯಲಿದೆ. ಅಫ್ಘಾನಿಸ್ತಾನ ತಂಡ ತವರಿಗೆ ಗಂಟುಮೂಟೆ ಕಟ್ಟಲಿದೆ. ಈ ಫಲಿತಾಂಶವು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಮಹತ್ವವನ್ನು ಕುಗ್ಗಿಸಲಿದೆ.
►ಪಂದ್ಯವು ಮಳೆಗಾಹುತಿಯಾದರೆ: ಆಸ್ಟ್ರೇಲಿಯ ತಂಡವು 4 ಅಂಕದೊಂದಿಗೆ ಸೆಮಿ ಫೈನಲ್ಗೆ ತಲುಪಲಿದೆ. ಮೂರಂಕವನ್ನು ಗಳಿಸಲಿರುವ ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.
ಇಂಗ್ಲೆಂಡ್-ದಕ್ಷಿಣ ಆಫ್ರಿಕಾ:
ಆಸ್ಟ್ರೇಲಿಯ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವೆ ಶುಕ್ರವಾರ ನಡೆಯಲಿರುವ ಪಂದ್ಯವು ಮಳೆಗಾಹುತಿಯಾದರೆ ಮಾತ್ರ ಈ ಪಂದ್ಯವು ಸೆಮಿ ಫೈನಲ್ ಸ್ಪರ್ಧೆಯ ವಿಚಾರದಲ್ಲಿ ಹೆಚ್ಚು ಮಹತ್ವ ಪಡೆಯಲಿದೆ.
► ಒಂದು ವೇಳೆ ಆಸ್ಟ್ರೇಲಿಯದ ಸೋತ ನಂತರ ಇಂಗ್ಲೆಂಡ್ ಗೆದ್ದರೆ: ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಸಮಾಧಾನಕರ ಗೆಲುವು ದಾಖಲಿಸಿದರೆ, ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಲಾ 3 ಅಂಕ ಗಳಿಸಲಿವೆ. ‘ಬಿ’ ಗುಂಪಿನಿಂದ ಅಫ್ಘಾನಿಸ್ತಾನ ತಂಡದೊಂದಿಗೆ ಸೆಮಿ ಫೈನಲ್ಗೆ ತಲುಪುವ ತಂಡವನ್ನು ನೆಟ್ ರನ್ರೇಟ್ ಮೂಲಕ ನಿರ್ಧರಿಸಲಾಗುತ್ತದೆ.
► ಆಸ್ಟ್ರೇಲಿಯ-ಅಫ್ಘಾನಿಸ್ತಾನದ ಪಂದ್ಯ ಮಳೆಗಾಹುತಿಯಾದ ನಂತರ ಇಂಗ್ಲೆಂಡ್ ಜಯ ಸಾಧಿಸಿದರೆ: ಆಸ್ಟ್ರೇಲಿಯ ನಾಲ್ಕು ಅಂಕವನ್ನು ಗಳಿಸಲಿದೆ. ತಲಾ 3 ಅಂಕ ಗಳಿಸಲಿರುವ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಎರಡನೇ ಸೆಮಿ ಫೈನಲಿಸ್ಟ್ ತಂಡವನ್ನು ನೆಟ್ ರನ್ರೇಟ್ ನಿರ್ಧರಿಸಲಿದೆ.
► ಒಂದು ವೇಳೆ ಆಸ್ಟ್ರೇಲಿಯ ಸೋತ ನಂತರ, ದಕ್ಷಿಣ ಆಫ್ರಿಕಾ ಜಯ ಸಾಧಿಸಿದರೆ: ಹರಿಣ ಪಡೆಯು 5 ಅಂಕದೊಂದಿಗೆ ಸೆಮಿ ಫೈನಲ್ಗೆ ಪ್ರವೇಶಿಸಲಿದೆ. 4 ಅಂಕ ಗಳಿಸಲಿರುವ ಅಫ್ಘಾನಿಸ್ತಾನ ತಂಡ ಮುಂದಿನ ಸುತ್ತಿಗೇರಲಿದೆ.
► ಆಸ್ಟ್ರೇಲಿಯ-ಅಫ್ಘಾನಿಸ್ತಾನದ ಪಂದ್ಯ ಮಳೆಗಾಹುತಿಯಾದ ನಂತರ ದಕ್ಷಿಣ ಆಫ್ರಿಕಾ ಜಯ ಸಾಧಿಸಿದರೆ: ದಕ್ಷಿಣ ಆಫ್ರಿಕಾ ತಂಡವು ಐದಂಕ ಗಳಿಸಿ ನಾಲ್ಕಂಕ ಗಳಿಸಲಿರುವ ಆಸ್ಟ್ರೇಲಿಯ ತಂಡದೊಂದಿಗೆ ಸೆಮಿ ಫೈನಲ್ಗೆ ತಲುಪಲಿದೆ.
► ಆಸ್ಟ್ರೇಲಿಯ ಸೋತ ನಂತರ ದ. ಆಫ್ರಿಕಾ-ಇಂಗ್ಲೆಂಡ್ ಪಂದ್ಯ ಮಳೆಗಾಹುತಿಯಾದರೆ: ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನ್ ತಂಡಗಳು ತಲಾ 4 ಅಂಕ ಗಳಿಸಲಿವೆ. ಉಭಯ ತಂಡಗಳು ಸೆಮಿ ಫೈನಲ್ಗೆ ಲಗ್ಗೆ ಇಡಲಿವೆ.
► ಎರಡೂ ಪಂದ್ಯಗಳು ಮಳೆಗಾಹುತಿಯಾದರೆ: ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ತಂಡಗಳು ತಲಾ 4 ಅಂಕಗಳೊಂದಿಗೆ ಸೆಮಿ ಫೈನಲ್ಗೆ ತಲುಪಲಿದೆ. ಅಫ್ಘಾನಿಸ್ತಾನ ಒಟ್ಟು 3 ಅಂಕ ಗಳಿಸಲಿದೆ.