ಚಾಂಪಿಯನ್ಸ್ ಟ್ರೋಫಿ: ಬೆನ್ ಸ್ಟೋಕ್ಸ್ ಅಲಭ್ಯ, ಇಂಗ್ಲೆಂಡ್ಗೆ ತೀವ್ರ ಹಿನ್ನಡೆ
ಬೆನ್ ಸ್ಟೋಕ್ಸ್ | PC:X/@benstokes38
ಲಂಡನ್: ನ್ಯೂಝಿಲ್ಯಾಂಡ್ ವಿರುದ್ಧ ಈ ತಿಂಗಳಾರಂಭದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಎಡಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಆ ನಂತರ ಭಾರತ ವಿರುದ್ಧ ಸೀಮಿತ ಓವರ್ ಕ್ರಿಕೆಟ್ ಸರಣಿಗಳಿಂದ ಹೊರಗುಳಿದಿದ್ದಾರೆ.
ಮುಂಬರುವ ಭಾರತ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗಳು ಹಾಗೂ 2025-26ರ ಆ್ಯಶಸ್ ಸರಣಿಗಾಗಿ ಆಸ್ಟ್ರೇಲಿಯ ಪ್ರವಾಸವನ್ನು ಪರಿಗಣಿಸಿ ಸ್ಟೋಕ್ಸ್ರನ್ನು ಮುಂದಿನ ಎರಡು ಸರಣಿಗಳಲ್ಲಿ ಆಡಿಸುವ ಅಪಾಯಕ್ಕೆ ಕೈ ಹಾಕದಿರಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಟೆಸ್ಟ್ ತಂಡದ ಮಾಜಿ ನಾಯಕ ಹಾಗೂ ಪ್ರಮುಖ ಬ್ಯಾಟರ್ ಜೋ ರೂಟ್, ಭಾರತದಲ್ಲಿ 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ನಂತರ ಮೊದಲ ಬಾರಿ ಇಂಗ್ಲೆಂಡ್ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ.
ಬೆನ್ನುನೋವಿನಿಂದಾಗಿ ಇತ್ತೀಚೆಗೆ ನಡೆದ ಟೆಸ್ಟ್ ಸರಣಿಗಳಿಂದ ವಂಚಿತರಾಗಿದ್ದ ವೇಗದ ಬೌಲರ ಮಾರ್ಕ್ ವುಡ್ ಕೂಡ ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ವಿರುದ್ಧ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಯು ಕೋಚ್ ಬ್ರೆಂಡನ್ ಮೆಕಲಮ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ಆಡಲಿರುವ ಮೊದಲ ಸೀಮಿತ ಓವರ್ ಪಂದ್ಯಾವಳಿ ಆಗಿದೆ.
2023ರ ನವೆಂಬರ್ನ ನಂತರ ಇಂಗ್ಲೆಂಡ್ ತಂಡವು 50 ಓವರ್ ಹಾಗೂ ಟಿ-20 ವಿಶ್ವಕಪ್ ಪ್ರಶಸ್ತಿಗಳನ್ನು ಸೋತಿದ್ದರೂ ಜೋಸ್ ಬಟ್ಲರ್ ಏಕದಿನ ಹಾಗೂ ಟಿ-20 ತಂಡಗಳಲ್ಲಿ ತನ್ನ ನಾಯಕತ್ವ ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡವು ಜನವರಿ 17ರಂದು ಭಾರತಕ್ಕೆ ನಿರ್ಗಮಿಸಲಿದ್ದು, ಜ.22ರಂದು ಕೋಲ್ಕತಾದಲ್ಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಟಿ-20 ಪಂದ್ಯವನ್ನು ಆಡಲಿದೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ನಾಗ್ಪುರದಲ್ಲಿ ಫೆ.6ರಿಂದ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದು ಚಾಂಪಿಯನ್ಸ್ ಟ್ರೋಫಿಗೆ ಪೂರ್ವ ತಯಾರಿಯಾಗಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಆಡಲಿದ್ದು, ಟೂರ್ನಿಯು ಫೆ.19ರಿಂದ ಮಾ.9ರ ತನಕ ನಡೆಯುವ ಸಾಧ್ಯತೆಯಿದೆ. ಪಂದ್ಯಗಳ ನಿರ್ದಿಷ್ಟ ದಿನಗಳು ಇನ್ನಷ್ಟೇ ಪ್ರಕಟವಾಗಬೇಕಾಗಿದೆ.
ಭಾರತ ಪ್ರವಾಸ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿಗೆ ಇಂಗ್ಲೆಂಡ್ ಏಕದಿನ ತಂಡ
ಜೋಸ್ ಬಟ್ಲರ್(ನಾಯಕ/ವಿಕೆಟ್ಕೀಪರ್), ಜೋಫ್ರಾ ಆರ್ಚರ್, ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೆಂಡನ್ ಕಾರ್ಸ್, ಬೆನ್ ಡಕೆಟ್, ಜಮೀ ಒವರ್ಟನ್, ಜಮೀ ಸ್ಮಿತ್(ವಿಕೆಟ್ಕೀಪರ್), ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್(ವಿಕೆಟ್ಕೀಪರ್), ಮಾರ್ಕ್ ವುಡ್.
►ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ಟಿ-20 ತಂಡ
ಜೋಸ್ ಬಟ್ಲರ್(ನಾಯಕ/ವಿಕೆಟ್ಕೀಪರ್), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೆಂಡನ್ ಕಾರ್ಸ್, ಬೆನ್ ಡಕೆಟ್, ಜಮೀ ಓವರ್ಟನ್, ಜಮೀ ಸ್ಮಿತ್(ವಿಕೆಟ್ಕೀಪರ್), ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.