ಹೈಬ್ರಿಡ್ ಮಾದರಿಯಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ: ಐಸಿಸಿ ಘೋಷಣೆ
ಇನ್ನು ಭಾರತ ಆತಿಥ್ಯದ ಪಾಕ್ ಪಂದ್ಯಗಳೂ ತಟಸ್ಥ ಸ್ಥಳಗಳಲ್ಲಿ!
PC : @ICC
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸ್ಥಳಗಳ ಬಗ್ಗೆ ಇದ್ದ ಗೊಂದಲ ಕೊನೆಗೂ ಮುಕ್ತಾಯಗೊಂಡಿದೆ. ಪಂದ್ಯಾವಳಿಯು ಪಾಕಿಸ್ತಾನ ಮತ್ತು ತಟಸ್ಥ ಸ್ಥಳವೊಂದರಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗುರುವಾರ ಘೋಷಿಸಿದೆ.
2024-2027ರ ಪ್ರಸಾರ ಹಕ್ಕುಗಳ ಚಕ್ರದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಪಂದ್ಯಗಳು ತಟಸ್ಥ ಸ್ಥಳವೊಂದರಲ್ಲಿ ನಡೆಯುವುದು ಎಂದು ಐಸಿಸಿ ಹೇಳಿದೆ. ಅಂದರೆ, ಈ ಅವಧಿಯಲ್ಲಿ ಪಾಕಿಸ್ತಾನ ಆತಿಥ್ಯ ವಹಿಸುವ ಭಾರತದ ವಿರುದ್ಧದ ಪಂದ್ಯಗಳು ಮತ್ತು ಭಾರತ ಆತಿಥ್ಯ ವಹಿಸುವ ಪಾಕಿಸ್ತಾನ ವಿರುದ್ಧದ ಪಂದ್ಯಗಳೆಲ್ಲವೂ ಹೈಬ್ರಿಡ್ ಮಾದರಿಯಲ್ಲೇ ನಡೆಯಲಿವೆ.
ಆದರೆ ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಬಹುನಿರೀಕ್ಷಿತ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿಲ್ಲ.
ಹೈಬ್ರಿಡ್ ಮಾದರಿ ವ್ಯವಸ್ಥೆಯು ಅನ್ವಯಗೊಳ್ಳುವ ಪಂದ್ಯಾವಳಿಗಳ ವಿವರ ಹೀಗಿದೆ: ಪಾಕಿಸ್ತಾನದಲ್ಲಿ ನಡೆಯಲಿರುವ 2025ರ ಚಾಂಪಿಯನ್ಸ್ ಟ್ರೋಫಿ, ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ಹಾಗೂ ಭಾರತ ಮತ್ತು ಶ್ರೀಲಂಕಾಗಳ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್.
ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಹೋಗಲು ಭಾರತ ನಿರಾಕರಿಸಿತ್ತು.
2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಆಡಿಲ್ಲ. ಕಳೆದ ವರ್ಷ ಪಾಕಿಸ್ತಾನವು ಏಶ್ಯಾ ಕಪ್ನ ಆತಿಥ್ಯ ವಹಿಸಿತ್ತು. ಆದರೆ, ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಶ್ರೀಲಂಕಾದಲ್ಲಿ ಆಡಿತ್ತು. ಅಂತಿಮವಾಗಿ ಭಾರತ ಪ್ರಶಸ್ತಿ ಜಯಿಸಿತ್ತು.
ಆದರೆ, 2023ರಲ್ಲಿ ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್ನ ತನ್ನ ಪಂದ್ಯಗಳನ್ನು ಪಾಕಿಸ್ತಾನವು ಭಾರತದಲ್ಲಿ ಆಡಿತ್ತು.
‘‘2024ರಿಂದ 2027ರವರೆಗಿನ ಪ್ರಸಾರ ಹಕ್ಕುಗಳ ಚಕ್ರದಲ್ಲಿ, ಭಾರತ ಅಥವಾ ಪಾಕಿಸ್ತಾನ ಆತಿಥ್ಯ ವಹಿಸಲಿರುವ ಎಲ್ಲಾ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಆತಿಥೇಯ ದೇಶವು ಸೂಚಿಸುವ ತಟಸ್ಥ ಸ್ಥಳವೊಂದರಲ್ಲಿ ಆಡುವುದಕ್ಕೆ ಐಸಿಸಿ ಮಂಡಳಿಯು ಅನುಮೋದನೆ ನೀಡಿದೆ’’ ಎಂದು ಐಸಿಸಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು’’ ಎಂದು ಅದು ಹೇಳಿದೆ.
ಎಂಟು ತಂಡಗಳ ಪಂದ್ಯಾವಳಿಯಲ್ಲಿ, ಆತಿಥೇಯ ಪಾಕಿಸ್ತಾನವಲ್ಲದೆ ಅಫ್ಘಾನಿಸ್ತಾನ, ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಝಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕ ತಂಡಗಳು ಪಾಲ್ಗೊಳ್ಳಲಿವೆ.