ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪೂರ್ಣ ಪ್ರಮಾಣದ ಆತಿಥ್ಯಕ್ಕೆ ಪಾಕಿಸ್ತಾನದಲ್ಲಿ ಸಿದ್ಧತೆ
ಕರಾಚಿ : ಪಾಕಿಸ್ತಾನವು ಮೊದಲ ಬಾರಿಗೆ ಪ್ರಮುಖ ಬಹು ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯೊಂದನ್ನು ಸ್ವತಂತ್ರವಾಗಿ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲು ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಈ ಬಾರಿ ಪಾಕಿಸ್ತಾನದಲ್ಲಿ ನಡೆಯಲಿದೆ.
ಈ ಹಿಂದೆ, 1996ರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಸಹ-ಆತಿಥ್ಯವನ್ನು ಅದು ಭಾರತ ಮತ್ತು ಶ್ರೀಲಂಕಾಗಳ ಜೊತೆಗೆ ವಹಿಸಿತ್ತು. ಅದಕ್ಕೂ ಮೊದಲು ಪಾಕಿಸ್ತಾನವು 1987ರಲ್ಲಿ ರಿಲಯನ್ಸ್ ಕಪ್ ಅನ್ನು ಭಾರತದ ಜೊತೆಗೆ ಆಯೋಜಿಸಿತ್ತು.
ಆದರೆ, 1996ರ ಬಳಿಕ, ಪಾಕಿಸ್ತಾನವು ಎರಡು ಗಂಭೀರ ಭದ್ರತಾ ಸವಾಲುಗಳನ್ನು ಎದುರಿಸಿತು. ಅವುಗಳೆಂದರೆ: 2001ರಲ್ಲಿ ಅಮೆರಿಕದ ಮೇಲೆ ನಡೆದ 9/11 ಉಗ್ರ ದಾಳಿ ಮತ್ತು 2009ರಲ್ಲಿ ಪ್ರವಾಸಿ ಶ್ರೀಲಂಕಾ ತಂಡದ ಮೇಲೆ ನಡೆದ ಉಗ್ರ ದಾಳಿ. ಹಾಗಾಗಿ, ಇತರ ದೇಶಗಳು ಆ ದೇಶಕ್ಕೆ ಪ್ರಯಾಣಿಸಲು ಹಿಂದೇಟು ಹಾಕಿದವು.
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, 2008ರ ಬಳಿಕ, ಭಾರತವು ಆ ದೇಶಕ್ಕೆ ಪ್ರವಾಸ ಕೈಗೊಂಡಿಲ್ಲ.
2009ರ ದಾಳಿಯ ಬಳಿಕ, 2015ರವರೆಗೆ ಪಾಕಿಸ್ತಾನದಲ್ಲಿ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ನಡೆಯಲಿಲ್ಲ. 2015ರಲ್ಲಿ, ಜಿಂಬಾಬ್ವೆಯು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡ ಅಂತರರಾಷ್ಟ್ರೀಯ ಕ್ರಿಕೆಟ್ ತಂಡವಾಯಿತು. ಅದು ಆ ಪ್ರವಾಸದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಿತು.