ಚಾಂಪಿಯನ್ಸ್ ಟ್ರೋಫಿ ವಿನ್ನರ್ ಗಳ ಆಗಮನ ; ರೋಹಿತ್, ಹಾರ್ದಿಕ್, ಶ್ರೇಯಸ್, ಗಂಭೀರ್ ಗೆ ಭವ್ಯ ಸ್ವಾಗತ

PC : PTI
ಹೊಸದಿಲ್ಲಿ: 2025ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವು ಯಶಸ್ವಿ ಅಭಿಯಾನ ಪೂರೈಸಿದ ನಂತರ ತಂಡದ ಪ್ರಮುಖ ಸದಸ್ಯರಾದ ನಾಯಕ ರೋಹಿತ್ ಶರ್ಮಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಸೋಮವಾರ ರಾತ್ರಿ ಸ್ವದೇಶಕ್ಕೆ ವಾಪಸಾಗಿದ್ದು, ಭವ್ಯ ಸ್ವಾಗತ ನೀಡಲಾಗಿದೆ.
ದುಬೈನಿಂದ ದಿಲ್ಲಿಯ ಇಂದಿರಾಗಾಂಧಿ ಇಂಟರ್ನ್ಯಾಶನಲ್ ಏರ್ಪೋರ್ಟ್ಗೆ ಬಂದಿಳಿದ ಟೀಮ್ ಇಂಡಿಯಾದ ಪರ ವೇಗದ ಬೌಲರ್ ಹರ್ಷಿತ್ ರಾಣಾ ಮೊದಲಿಗೆ ಆಗಮಿಸಿದರು.
ಭಾರತ ತಂಡವು ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಲು ತಂಡಕ್ಕೆ ಮಾರ್ಗದರ್ಶನ ನೀಡಿರುವ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ದಿಲ್ಲಿಗೆ ಸೋಮವಾರ ರಾತ್ರಿ ಆಗಮಿಸಿದರು.
ಕಳೆದ ವರ್ಷ ಜುಲೈನಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದ ಗಂಭೀರ್ ಪಾಲಿಗೆ 2025ರ ಚಾಂಪಿಯನ್ಸ್ ಟ್ರೋಫಿ ಗೆಲುವು ಮೊದಲ ಪ್ರಮುಖ ಸಾಧನೆಯಾಗಿದೆ.
ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮುಂಬೈ ವಿಮಾನ ನಿಲ್ದಾಣಕ್ಕೆ ತನ್ನ ಕುಟುಂಬದ ಜೊತೆಗೆ ಆಗಮಿಸಿದರು.
ಹಿರಿಯ ಆರಂಭಿಕ ಆಟಗಾರ ರೋಹಿತ್ ಅವರು ಭಾರತ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಮುಂಬೈಗೆ ಆಗಮಿಸಿದ ರೋಹಿತ್ಗೆ ಅಭಿಮಾನಿಗಳು ಆತ್ಮೀಯ ಸ್ವಾಗತ ಕೋರಿದರು.
ರೋಹಿತ್ ಫೈನಲ್ ಪಂದ್ಯದಲ್ಲಿ 83 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 76 ರನ್ ಗಳಿಸಿ ಪಂದ್ಯ ಗೆಲ್ಲಲು ಮುಖ್ಯ ಪಾತ್ರವಹಿಸಿದ್ದು, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.