ಚಾಂಪಿಯನ್ಸ್ ಟ್ರೋಫಿ: ಯಶಸ್ವಿ ಜೈಸ್ವಾಲ್ ಮೀಸಲು ಆಟಗಾರ
PC: PTI
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಅದ್ಭುತವಾಗಿ ಆರಂಭಿಸಿರುವ ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಏಕದಿನ ತಂಡಲ್ಲಿ ಸ್ಥಾನ ಪಡೆಯಲು ಇನ್ನೂ ಕಾಯಬೇಕಿದೆ. ದಿನೇಶ್ ಕಾರ್ತಿಕ್ ಅವರ ಪ್ರಕಾರ 2025ರ ಚಾಂಪಿಯನ್ಸ್ ಟ್ರೋಫಿಗೆ ಜೈಸ್ವಾಲ್ "ಬ್ಯಾಕ್ ಅಪ್ ಆರಂಭಿಕ ಆಟಗಾರ"ನಾಗಿರುತ್ತಾರೆ. ಈ ಟೂರ್ನಿಯಲ್ಲಿ ನಾಯಕ ರೋಹಿತ್ ಶರ್ಮಾ ಜತೆಗೆ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸುವರು.
ಜೈಸ್ವಾಲ್ ಅವರು ರೋಹಿತ್ ಜತೆಗೆ ಇನಿಂಗ್ಸ್ ಆರಂಭಿಸುತ್ತಾರೆಯೇ ಎಂದು ಕ್ರಿಕ್ ಬಝ್ ನಲ್ಲಿ ಕೇಳಿದ ಪ್ರಶ್ನೆಗೆ ಕಾರ್ತಿಕ್, "ಏಕೆ" ಎಂದು ಅಚ್ಚರಿ ಸೂಚಿಸಿದರು.
"ಬ್ಯಾಕಪ್ ಆರಂಭಿಕ ಆಟಗಾರನಾಗುವ ಅಮೋಘ ಅವಕಾಶವನ್ನು ಜೈಸ್ವಾಲ್ ಪಡೆದಿದ್ದಾರೆ. ನಿರೀಕ್ಷೆಯಂತೆ ಶುಭಮನ್ ಗಿಲ್ ಅವರಿಂದ ಸಾಧನೆ ಬರದಿದ್ದಲ್ಲಿ ಅವರಿಗೆ ಶೀಘ್ರ ಅವಕಾಶ ದೊರಕಲಿದೆ. ಭಾರತ ಸದೃಢವಾದ ಮಧ್ಯಮ ಕ್ರಮಾಂಕವನ್ನು ಕೂಡಾ ಹೊಂದಿದೆ" ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ವರ್ಷದಿಂದೀಚೆಗೆ ಏಕದಿನ ಪಂದ್ಯಗಳಲ್ಲಿ ಭಾರತ 24 ವರ್ಷ ವಯಸ್ಸಿನ ಗಿಲ್ ಮೇಲೆ ವಿಶ್ವಾಸ ಇರಿಸಿ, ರೋಹಿತ್ ಜತೆ ಇನಿಂಗ್ಸ್ ಆರಂಭಿಸಲು ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಈ ಬಲಗೈ ಆಟಗಾರ 47 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಟೆಸ್ಟ್ ಹಾಗೂ ಟಿ20 ಪಂದ್ಯಗಳಲ್ಲಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಗಿಲ್ ಅವರ ಏಳು-ಬೀಳು ಚರ್ಚೆಯ ಅಂಶವಾಗಿದೆ.
ಚಾಂಪಿಯನ್ಸ್ ಟ್ರೋಫಿಗಿಂತ ಮುನ್ನ ಭಾರತ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳನ್ನು ಆಡಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಗಿಲ್-ರೋಹಿತ್ ಜೋಡಿ ಇನಿಂಗ್ಸ್ ಆರಂಭಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಕಾರ್ತಿಕ್ ಹೇಳಿದ್ದಾರೆ. ಮೂರು ಪಂದ್ಯಗಳ ಕೊನೆಯ ಏಕದಿನ ಸರಣಿಯಲ್ಲಿ ರೋಹಿತ್ ಬಳಗ ಶ್ರೀಲಂಕಾ ವಿರುದ್ಧ 0-2ರಿಂದ ಸೋಲು ಅನುಭವಿಸಿತ್ತು.