ಸತತ 2ನೇ ಒಲಿಂಪಿಕ್ ಪದಕ ಪಡೆಯುವ ಅವಕಾಶ ತಪ್ಪಿಸಿಕೊಂಡ ಮೀರಾಬಾಯಿ ಚಾನು
PC: facebook.com/s.mirabaichanu
ಪ್ಯಾರಿಸ್: ಭಾರತದ ವೆಯ್ಟ್ ಲಿಫ್ಟಿಂಗ್ ತಾರೆ ಮೀರಾಬಾಯಿ ಚಾನು ಸತತ ಎರಡನೇ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪದಕ ಪಡೆಯುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಕಳೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಚಾನು ಈ ಬಾರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಕಂಚಿನ ಪದಕ ಗೆದ್ದ ತಮ್ಮ ಥಾಯ್ಲೆಂಡ್ ಎದುರಾಳಿಗಿಂತ ಕೇವಲ ಒಂದು ಕೆ.ಜಿ. ಕಡಿಮೆ ಭಾರ ಎತ್ತುವ ಮೂಲಕ ಚಾನು ಅವರ ಒಲಿಂಪಿಕ್ಸ್ ಪದಕದ ಕನಸು ಭಗ್ನಗೊಂಡಿತು.
ಸ್ನ್ಯಾಚ್ ನಲ್ಲಿ ಮೊದಲ ಪ್ರಯತ್ನದಲ್ಲೇ 85 ಕೆ.ಜಿ. ಭಾರವನ್ನು ಚಾನು ಸರಾಗವಾಗಿ ಎತ್ತಿದರು. ಆದರೆ 88 ಕೆಜಿಗೆ ಹೆಚ್ಚಿಸಿದಾಗ ಎರಡನೇ ಪ್ರಯತ್ನದಲ್ಲಿ ವಿಫಲರಾದರು. ಆದರೆ ಮೂರನೇ ಪ್ರಯತ್ನದಲ್ಲಿ ಇದನ್ನು ಸಾಧಿಸಿದರು. ಆದರೆ 2ನೇ ಪ್ರಯತ್ನದಲ್ಲೇ 88 ಕೆ.ಜಿ. ಭಾರ ಎತ್ತಿದ್ದರೆ 89 ಅಥವಾ 90 ಕೆ.ಜಿಗೆ ಪ್ರಯತ್ನ ಮಾಡಬಹುದಿತ್ತು.
ರೊಮಾನಿಯಾದ ವೆಲೆಂಟಿನ್ ಕ್ಯಾಭಿ (93) ಮತ್ತು ಚೀನಾದ ಹೌ ಝಿಯೂ (93) ಕೆಜಿ ಅವರನ್ನು ಹೊರತುಪಡಿಸಿ ಥಾಯ್ಲೆಂಡಿನ ಸುರೋದ್ಚನಾ ಖಾಂಬೊ ಅವರ ಜತೆ ಜಂಟಿ ಮೂರನೇ ಸ್ಥಾನದಲ್ಲಿದ್ದರು. ಪ್ರಥಮ ಸ್ಥಾನಿಗೆ ಐದು ಕೆ.ಜಿ. ಅಂತರವಿದ್ದರೂ ಆತ್ಮವಿಶ್ವಾಸದಿಂದ ಸ್ಪರ್ಧೆ ಆರಂಭಿಸಿದ ಚಾನು ಕ್ಲೀನ್ ಅಂಡ್ ಜರ್ಕ್ ನಲ್ಲಿ ಮೊದಲ ಪ್ರಯತ್ನದಲ್ಲಿ 111 ಕೆ.ಜಿ. ಭಾರ ಎತ್ತಿದರು. ಎದುರಾಳಿ ಕಾಂಬಿ 106 ಕೆ.ಜಿಯೊಂದಿಗೆ ಆರಂಭಿಸಿ ಎರಡನೇ ಪ್ರಯತ್ನದಲ್ಲಿ 110 ಕೆಜಿ ಎತ್ತಿದರು. ಝೊಹು ಹಾಗೂ ಸುರೋದ್ ಚನಾ ಕೂಡಾ 110 ಕೆಜಿ ಎತ್ತಿದರು. 114 ಕೆ.ಜಿ ಎತ್ತುವ ಮೂರನೇ ಪ್ರಯತ್ನದಲ್ಲಿ ಚಾನು ವಿಫಲವಾಗುವ ಮೂಲಕ ಪದಕ ಅವಕಾಶದಿಂದ ವಂಚಿತರಾದರು. ಮೂರನೇ ಪ್ರಯತ್ನದಲ್ಲಿ 117 ಕೆ.ಜಿ ಎತ್ತಿದ ಝೊಹು ಚಿನ್ನದ ಪದಕ ಗೆದ್ದರು. ಚಾಂಬಿ ದ್ವಿತೀಯ ಸ್ಥಾನ ಪಡೆದರೆ, ಥಾಯ್ಲೆಂಡ್ ಮಹಿಳೆ ಮೀರಾಬಾಯಿಗಿಂತ ಒಂದು ಕೆ.ಜಿ. ಹೆಚ್ಚಿನ ಭಾರ ಎತ್ತುವ ಮೂಲಕ ಕಂಚಿನ ಪದಕ ಕಸಿದುಕೊಂಡರು.