ರೋಹಿತ್ ಶರ್ಮಾ ಶತಕ ವ್ಯರ್ಥ: ಮುಂಬೈ ವಿರುದ್ಧ ಚೆನ್ನೈಗೆ 20 ರನ್ ಜಯ
Photo:X/@IPL
ಮುಂಬೈ,: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ, ರವಿವಾರದ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 20 ರನ್ಗಳಿಂದ ಸೋಲಿಸಿದೆ.
ರೋಹಿತ್ ಶರ್ಮರ ಶತಕದ ಹೊರತಾಗಿಯೂ, 207 ರನ್ಗಳ ಸವಾಲಿನ ಗುರಿಯನ್ನು ತಲುಪಲು ಮುಂಬೈ ಇಂಡಿಯನ್ಸ್ ಗೆ ಸಾಧ್ಯವಾಗಲಿಲ್ಲ. ಅದು 20 ಓವರ್ ಗಳಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡು 186 ರನ್ಗಳನ್ನು ಗಳಿಸಿತು.
ರೋಹಿತ್ ಶರ್ಮ 63 ಎಸೆತಗಳಲ್ಲಿ 105 ರನ್ ಗಳಿಸಿ ಅಜೇಯರಾಗಿ ಉಳಿದರು. ಇಶಾನ್ ಕಿಶನ್ 15 ಎಸೆತಗಳಲ್ಲಿ 23 ರನ್ ಗಳಿಸಿ ಬೇಗನೇ ನಿರ್ಗಮಿಸಿದರು. ಹಿಂದಿನ ಪಂದ್ಯದಲ್ಲಿ ಬಿರುಸಿನ ಅರ್ಧ ಶತಕ ಬಾರಿಸಿದ್ದ ಸೂರ್ಯಕುಮಾರ್ ಯಾದವ್ ಶೂನ್ಯ ಸಂಪಾದಿಸಿದರು.
ಕೆಳ ಕ್ರಮಾಂಕದಲ್ಲಿ ತಿಲಕ್ ವರ್ಮ 20 ಎಸೆತಗಳಲ್ಲಿ 31 ರನ್ ಗಳಿಸಿದರು.
ಇದಕ್ಕೂ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ಋತುರಾಜ್ ಗಾಯಕ್ವಾಡ್ ಮತ್ತು ಶಿವಮ್ ದುಬೆಯ ಅರ್ಧ ಶತಕಗಳು ಮತ್ತು ಕೊನೆಯ ಓವರ್ ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು 206 ರನ್ಗಳನ್ನು ಕಲೆ ಹಾಕಿತು.
ನಾಯಕ ಋತುರಾಜ್ ಗಾಯಕ್ವಾಡ್ 40 ಎಸೆತಗಳಲ್ಲಿ 69 ರನ್ಗಳನ್ನು ಬಾರಿಸಿದರೆ, ಶಿವಮ್ ದುಬೆ 38 ಎಸೆತಗಳಲ್ಲಿ 66 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಓವರ್ನಲ್ಲಿ ಬ್ಯಾಟಿಂಗ್ಗೆ ಇಳಿದ ಧೋನಿ, ಹಾರ್ದಿಕ್ ಪಾಂಡ್ಯ ಓವರ್ನಲ್ಲಿ ಬೆನ್ನು ಬೆನ್ನಿಗೆ ಮೂರು ಸಿಕ್ಸರ್ಗಳನ್ನು ಸಿಡಿಸಿದರು. ಅವರು 4 ಎಸೆತಗಳಲ್ಲಿ 20 ರನ್ಗಳನ್ನು ಕಲೆ ಹಾಕಿದರು. ಅವರು ಈ ಮೂಲಕ ಚೆನ್ನೈ ಸೂಪರ್ ಕಿಂಗ್ಗಾಗಿ 5,000ಕ್ಕಿಂತ ಹೆಚ್ಚಿನ ರನ್ಗಳನ್ನು ಗಳಿಸಿದ ಎರಡನೇ ಆಟಗಾರನಾದರು. ಇದಕ್ಕೂ ಮೊದಲು ಸುರೇಶ್ ರೈನಾ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ 200 ಪಂದ್ಯಗಳಲ್ಲಿ 5,529 ರನ್ಗಳನ್ನು ಗಳಿಸಿದ್ದಾರೆ. ಅದೇ ವೇಳೆ, ಧೋನಿ ತನ್ನ 250ನೇ ಪಂದ್ಯದಲ್ಲಿ 5,016 ರನ್ಗಳನ್ನು ಗಳಿಸಿದ್ದಾರೆ.