ಚೆಸ್ ಒಲಿಂಪಿಯಾಡ್ 2024 | ವೈಯಕ್ತಿಕ ಚಿನ್ನದ ಪದಕ ಗೆದ್ದ ಗುಕೇಶ್, ಅರ್ಜುನ್, ದಿವ್ಯಾ, ವಂತಿಕಾ
PC : PTI
ಬುಡಾಪೆಸ್ಟ್: ಭಾರತವು ಚೆಸ್ ಒಲಿಂಪಿಯಾಡ್ನಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ರವಿವಾರ ಅವಳಿ ಚಿನ್ನದ ಪದಕಗಳನ್ನು ಜಯಿಸಿ ಇತಿಹಾಸ ನಿರ್ಮಿಸಿದ ನಂತರ ಡಿ.ಗುಕೇಶ್, ಅರ್ಜುನ್, ದಿವ್ಯಾ ದೇಶ್ಮುಖ್ ಹಾಗೂ ವಂತಿಕಾ ಅಗರ್ವಾಲ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಹಂಗೇರಿಯದ ಬುಡಾಪೆಸ್ಟ್ನ ಸ್ಪೋರ್ಟ್ಸ್ ಹಾಗೂ ಕಾನ್ಫರೆನ್ಸ್ ಸೆಂಟರ್ನಲ್ಲಿ ರವಿವಾರ ಭಾರತದ ಪುರುಷರ ಹಾಗೂ ಮಹಿಳೆಯರ ತಂಡಗಳು ಅಂತಿಮ ಸುತ್ತಿನ ಪಂದ್ಯದಲ್ಲಿ ಕ್ರಮವಾಗಿ ಸ್ಲೊವೇನಿಯಾ ಹಾಗೂ ಅಝರ್ಬೈಜಾನ್ ತಂಡಗಳನ್ನು ಮಣಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿವೆ. ಈ ಮೂಲಕ ಮೊದಲ ಬಾರಿ ಚಿನ್ನದ ಪದಕ ಜಯಿಸಿರುವ ಭಾರತವು ಚೆಸ್ ಒಲಿಂಪಿಯಾಡ್ನಲ್ಲಿ ಇತಿಹಾಸ ನಿರ್ಮಿಸಿತು.
ಭಾರತ ಈ ಎರಡು ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿದ್ದು, ಭಾರತೀಯ ಚೆಸ್ಪಟುಗಳು ತಮ್ಮ ಪ್ರದರ್ಶನಕ್ಕಾಗಿ ವೈಯಕ್ತಿಕ ಪದಕಗಳನ್ನು ಬಾಚಿಕೊಂಡರು.
ಓಪನ್ ವಿಭಾಗದಲ್ಲಿ ಭಾರತವು 11 ಸುತ್ತುಗಳ ಪೈಕಿ 10ನ್ನು ಗೆದ್ದುಕೊಂಡಿದೆ. ಹಾಲಿ ಚಾಂಪಿಯನ್ ಉಜ್ಬೇಕಿಸ್ತಾನ ವಿರುದ್ಧ ಮಾತ್ರ ಡ್ರಾ ಸಾಧಿಸಿತ್ತು.
ಮತ್ತೊಂದೆಡೆ ಮಹಿಳೆಯರ ವಿಭಾಗದಲ್ಲಿ ಭಾರತವು 11 ಸುತ್ತುಗಳ ಪೈಕಿ 9ರಲ್ಲಿ ಜಯಶಾಲಿಯಾಗಿತ್ತು.
ವರ್ಲ್ಡ್ ಚಾಂಪಿಯನ್ಶಿಪ್ ಚಾಲೆಂಜರ್ ಡಿ.ಗುಕೇಶ್ ಟೂರ್ನಮೆಂಟ್ನಲ್ಲಿ 10 ಗೇಮ್ಗಳಲ್ಲಿ 9 ಪಾಯಿಂಟ್ಸ್ ಕಲೆ ಹಾಕಿ ಅಮೋಘ ಪ್ರದರ್ಶನ ನೀಡಿದರು. ಈ ಮೂಲಕ ಟಾಪ್ ಬೋರ್ಡ್ನಲ್ಲಿ ವೈಯಕ್ತಿಕ ಚಿನ್ನದ ಪದಕ ತನ್ನದಾಗಿಸಿಕೊಂಡರು.
18ರ ಹರೆಯದ ಗುಕೇಶ್ ಪ್ರದರ್ಶನದ ರೇಟಿಂಗ್ 3,056 ಆಗಿದ್ದು, ಪಂದ್ಯಾವಳಿಯಲ್ಲಿ 3,000 ಮಾರ್ಕ್ ಮೀರಿದ ಏಕೈಕ ಆಟಗಾರನಾಗಿದ್ದಾರೆ.
ಅರ್ಜುನ್ ಕೂಡ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದು, 11 ಗೇಮ್ಗಳಲ್ಲಿ 10 ಪಾಯಿಂಟ್ಸ್ ಕಲೆ ಹಾಕಿದರು. ಬೋರ್ಡ್ 3ರಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದುಕೊಂಡರು.
ಈ ಇಬ್ಬರು ಭಾರತೀಯ ಗ್ರ್ಯಾಂಡ್ಮಾಸ್ಟರ್ಗಳು ತಮ್ಮ ಫಿಡೆ ರೇಟಿಂಗ್ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, 2,800 ತಡೆ ದಾಟುವ ಸನಿಹದಲ್ಲಿದ್ದಾರೆ.
ಮಹಿಳೆಯರ ಚೆಸ್ ತಂಡದ ಹೊಸ ಮುಖ 18ರ ಹರೆಯದ ದಿವ್ಯಾ ದೇಶ್ಮುಖ್ ಪಂದ್ಯಾವಳಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದರು. ದಿವ್ಯಾ ಎಲ್ಲ ಪಂದ್ಯಗಳನ್ನು ಆಡಿ 9.5 ಪಾಯಿಂಟ್ಸ್ ಗಳಿಸಿದರು. ಅಂತಿಮ ಪಂದ್ಯದಲ್ಲಿ ನಿರ್ಣಾಯಕ ಜಯ ದಾಖಲಿಸಿ ಬೋರ್ಡ್ 3ರಲ್ಲಿ ವೈಯಕ್ತಿಕ ಚಿನ್ನದ ಪದಕ ಜಯಿಸಿದರು.
ವಂತಿಕಾ ಅಗರ್ವಾಲ್ ಕೂಡ ಬೋರ್ಡ್4ರಲ್ಲಿ ವೈಯಕ್ತಿಕ ಚಿನ್ನ ಗೆದ್ದುಕೊಂಡರು.
2024ರ ಚೆಸ್ ಒಲಿಂಪಿಯಾಡ್ನಲ್ಲಿ ಭಾರತವು ಗಪ್ರಿಂದಾಶ್ವಿಲಿ ಟ್ರೋಫಿಯನ್ನು ಉಳಿಸಿಕೊಂಡಿದೆ. ಮುಕ್ತ ಹಾಗೂ ಮಹಿಳೆಯರ ವಿಭಾಗದಲ್ಲಿ ಸಮಗ್ರ ಪ್ರದರ್ಶನಕ್ಕಾಗಿ ಭಾರತಕ್ಕೆ ಈ ಟ್ರೋಫಿ ನೀಡಲಾಯಿತು.
► 20 ವರ್ಷಗಳ ಕನಸು ನನಸಾಗಿಸಿಕೊಂಡ ಹರಿಕಾ
ಪ್ರತಿಷ್ಠಿತ ಚೆಸ್ ಒಲಿಂಪಿಯಾಡ್ ಪ್ರಶಸ್ತಿ ಗೆಲ್ಲುವ ಕನಸನ್ನು ಈಡೇರಿಸಿಕೊಳ್ಳಲು ಹಿರಿಯ ಚೆಸ್ ತಾರೆ ಡಿ.ಹರಿಕಾ 20 ವರ್ಷ ಕಾದಿದ್ದಾರೆ. ಪಂದ್ಯಾವಳಿಯಲ್ಲಿ ತನ್ನ ಪ್ರದರ್ಶನದಿಂದ ತೃಪ್ತರಾಗದಿದ್ದರೂ ಕೊನೆಗೂ ಚೆಸ್ ಒಲಿಂಪಿಯಾಡ್ ಪ್ರಶಸ್ತಿ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ತಂಡದಲ್ಲಿ 33ರ ಹರೆಯದ ಹರಿಕಾ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಟಾಪ್ ಬೋರ್ಡ್ನಲ್ಲಿ ಸ್ಥಾನ ಪಡೆದರು. 18ರ ಹರೆಯದ ದಿವ್ಯಾ ದೇಶ್ಮುಖ್ ಬೋರ್ಡ್3ರಲ್ಲಿ ಅಝರ್ಬೈಜಾನ್ ಆಟಗಾರ್ತಿಯನ್ನು ಮಣಿಸಿ ವೈಯಕ್ತಿಕ ಚಿನ್ನದ ಪದಕ ಖಚಿತಪಡಿಸಿದರು.
ಖಂಡಿತವಾಗಿಯೂ ಇದು ನನಗೆ ಸಹ ಆಟಗಾರ್ತಿಯರಿಗಿಂತಲೂ ಹೆಚ್ಚು ಭಾವನಾತ್ಮಕ ವಿಚಾರವಾಗಿದೆ. ನಾನು ಚಿನ್ನದ ಪದಕವನ್ನು ನೋಡಲು 20 ವರ್ಷಗಳಿಂದ ಆಡಿದ್ದೇನೆ. ಕೊನೆಗೂ ಚಿನ್ನದ ಪದಕ ನೋಡಿ ಸಂತೋಷವಾಯಿತು. ನಮ್ಮ ಹುಡುಗಿಯರ ಬಗ್ಗೆ ತುಂಬಾ ಸಂತೋಷ ಹಾಗೂ ಹೆಮ್ಮೆಯಾಗುತ್ತಿದೆ. ಯುವ ಚೆಸ್ ತಾರೆಯರು ತಂಡಕ್ಕೆ ಆಗಮಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿದರು ಎಂದು ಹರಿಕಾ ಹೇಳಿದ್ದಾರೆ.
ನನ್ನ ಪ್ರದರ್ಶನ ತೃಪ್ತಿಕರವಾಗಿಲ್ಲದಿರಬಹುದು. ಆದರೆ, ತಂಡ ಗೆದ್ದಿರುವ ಚಿನ್ನವು ನನಗೆ ಎಲ್ಲವನ್ನೂ ಮರೆತುಬಿಡುವಂತೆ ಮಾಡಿತು. ಹಿನ್ನಡೆಯ ನಂತರ ಪುಟಿದೆದ್ದ ರೀತಿಯು ನನಗೆ ಖುಷಿ ಕೊಟ್ಟಿದೆ ಎಂದು ಹರಿಕಾ ಹೇಳಿದ್ದಾರೆ.
ಇತ್ತೀಚೆಗೆ ಗಾಂಧಿನಗರದಲ್ಲಿ ವರ್ಲ್ಡ್ ಜೂನಿಯರ್ ಗರ್ಲ್ಸ್ ಚೆಸ್ ಚಾಂಪಿಯನ್ಶಿಪ್ ಜಯಿಸಿದ್ದ ದಿವ್ಯಾ ಅಗರ್ವಾಲ್ ಭಾರತೀಯ ಮಹಿಳೆಯರ ತಂಡವು ಐತಿಹಾಸಿಕ ಚಿನ್ನದ ಪದಕ ಜಯಿಸಲು ಪ್ರಮುಖ ಪಾತ್ರವಹಿಸಿದರು.
ತನಿಯಾ ಸಚ್ದೇವ್ ಹೆಚ್ಚು ಪಂದ್ಯಗಳನ್ನು ಆಡಲು ಅವಕಾಶ ಪಡೆಯದಿದ್ದರೂ ಬೋರ್ಡ್ 5ರಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಪ್ರಜ್ಞಾನಂದರ ಸಹೋದರಿ ಆರ್.ವೈಶಾಲಿ ಕೊನೆಯ 4 ಗೇಮ್ಗಳನ್ನು ಆಡಿದ್ದು ಕೇವಲ ಒಂದು ಅಂಕ ಗಳಿಸಿದರು. ಆದರೆ ಅದಕ್ಕೂ ಮೊದಲು ಮೊದಲ ಆರು ಗೇಮ್ಗಳಲ್ಲಿ 5 ಪಾಯಿಂಟ್ಸ್ ಗಳಿಸಿ ತಂಡದ ಗೆಲುವಿಗೆ ಬುನಾದಿ ಹಾಕಿಕೊಟ್ಟಿದ್ದರು.
ಕೊನೆಯ 2 ಸುತ್ತುಗಳು ತುಂಬಾ ನಿರ್ಣಾಯಕವಾಗಿದ್ದವು. ದಿವ್ಯಾ ಹಾಗೂ ವಂತಿಕಾ ಅತ್ಯುತ್ತಮವಾಗಿ ಆಡಿದರು. ವೈಶಾಲಿ ಕೊನೆಯ ತನಕವೂ ಕೆಲವು ಹಿನ್ನಡೆಗಳನ್ನು ಕಂಡರು. ಹರಿಕಾ ಪ್ರಬಲ ಪ್ರದರ್ಶನ ನೀಡಿದರು. ತಾನಿಯಾ ನಮಗೆ ಉತ್ತಮ ಅರಂಭವನ್ನು ನೀಡಿದರು ಎಂದು ಭಾರತ ತಂಡದ ನಾಯಕ ಗ್ರ್ಯಾಂಡ್ಮಾಸ್ಟರ್ ಅಭಿಜಿತ್ ಕುಂಟೆ ಮೆಚ್ಚುಗೆ ವ್ಯಕ್ತಪಡಿಸಿದರು.