ವಿಶ್ವಕಪ್: ಪಾಕಿಸ್ತಾನ ಗೆಲುವಿಗೆ 205 ರನ್ ಗುರಿ ನೀಡಿದ ಬಾಂಗ್ಲಾ
ಅಫ್ರಿದಿ, ವಸೀಂಗೆ ತಲಾ ಮೂರು ವಿಕೆಟ್
Photo: cricketworldcup.com
ಕಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 204 ರನ್ ಗೆ ಆಲೌಟ್ ಆದ ಬಾಂಗ್ಲಾದೇಶ, ಪಾಕ್ ಗೆಲುವಿಗೆ 205 ರನ್ ಗಳ ಸಾಧಾರಣ ಗುರಿ ನೀಡಿದೆ.
ಸೆಮೀಸ್ ಗೆ ಅರ್ಹತೆ ಪಡೆಯುವಲ್ಲಿ ಇತ್ತಂಡಗಳಿಗೂ ಪ್ರಮುಖವೆನಿಸಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲದೇಶ ತನ್ನ ರನ್ ರೇಟ್ ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ತನ್ನ ಉದ್ದೇಶಕ್ಕೆ ತದ್ವಿರುದ್ಧವಾಗಿ ಬ್ಯಾಟ್ ಬೀಸಿದ ಬಾಂಗ್ಲಾದೇಶ ಕಳಪೆ ಆರಂಭ ಪಡೆದುಕೊಂಡಿತು. ಓಪನರ್ ತಂಝಿದ್ ಹಸನ್ ಶೂನ್ಯಕ್ಕೆ ಶಾಹೀನ್ ಅಫ್ರಿದಿ ಬೌಲಿಂಗ್ ನಲ್ಲಿ ಮೊದಲ ಓವರ್ ನಲ್ಲಿಯೇ ವಿಕೆಟ್ ಕಳೆದುಕೊಂಡರೆ , ನಜ್ಮುಲ್ ಹುಸೈನ್ ಶಾಂಟೊ 2.4 ಓವರ್ ನಲ್ಲಿಯೇ 4 ರನ್ ಗೆ ಮತ್ತೆ ಶಾಹೀನ್ ಅಫ್ರಿದಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬ್ಯಾಟಿಂಗ್ ಬಂದ ಮುಶ್ಪಿಕುರ್ ರಹೀಮ್ 4 ರನ್ ಗೆ ಹಾರೀಸ್ ರವೂಫ್ ಬೌಲಿಂಗ್ ನಲ್ಲಿ ಔಟ್ ಆದರು. ಹೀಗೆ ತನ್ನ 6 ಓವರ್ ಮುಗಿಸುವಷ್ಟರಲ್ಲಿಯೇ ಬಾಂಗ್ಲಾ ತನ್ನ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಆರಂಭಿಕ ವಿಕೆಟ್ ಪತನಗಳ ನಡುವೆಯೂ 45 ರನ್ ಗಳಿಸಿ ಬ್ಯಾಟ್ ಬೀಸಿದ್ದ ಲಿಟನ್ ದಾಸ್, ಇಫ್ತಿಕಾರ್ ಅಹ್ಮದ್ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡು ಅರ್ಧಶತಕ ವಂಚಿತರಾದರು. ತಂಡದ ಪರ ಜವಾಬ್ದಾರಿಯುತ ಇನ್ನಿಂಗ್ಸ್ ನಿರ್ವಹಿಸಿದ ಮಾಜಿ ನಾಯಕ ಮುಹಮ್ಮದುಲ್ಲಾ 6 ಬೌಂಡರಿ 1 ಸಿಕ್ಸರ್ ಸಹಿತ 56 ರನ್ ಗಳಿಸಿ ಶಾಹೀನ್ ಅಫ್ರಿದಿಗೆ ಬೌಲ್ಡ್ ಆದರು. ಮುಹಮ್ಮದುಲ್ಲಾ ವಿಕೆಟ್ ಪತನ ಬಳಿಕ ತಂಡಕ್ಕೆ ಸ್ಪರ್ದಾತ್ಮಕ ರನ್ ಜೋಡಿಸುವ ಜವಾಬ್ದಾರಿ ಹೊತ್ತಿದ್ದ ನಾಯಕ ಶಾಕಿಬ್ ಉಲ್ ಹಸನ್ 43 ರನ್ ಗಳಿಸಿ ಹಾರೀಸ್ ರವೂಫ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಕಡೆಯಲ್ಲಿ ಬಾಂಗ್ಲಾ ಪರ ತೌಹೀದ್ ಹೃದೋಯ್ 7 ,ಮೆಹಿದಿ ಹಸನ್ 25 ,ತಸ್ಕಿನ್ ಅಹ್ಮದ್ 6 ರನ್ ಗಳಿಸಿದರು.
ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ, ಮುಹಮ್ಮದ್ ವಾಸಿಮ್ ತಲಾ 3 ವಿಕೆಟ್ ಪಡೆದು ಬಾಂಗ್ಲಾವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರೆ, ಹಾರೀಸ್ ರವೂಫ್ 2 ವಿಕೆಟ್ ಹಾಗೂ ಇಫ್ತಿಕಾರ್ ಅಹ್ಮದ್, ಉಸಾಮ ಮಿರ್ ತಲಾ ಒಂದು ವಿಕೆಟ್ ಪಡೆದುಕೊಂಡರು.