ಕೋಚಿಂಗ್ ಸಿಬ್ಬಂದಿ ಹುದ್ದೆ: ಗೌತಮ್ ಗಂಭೀರ್ ಸೂಚಿಸಿದ್ದ ಐವರ ಹೆಸರನ್ನು ತಿರಸ್ಕರಿಸಿದ ಬಿಸಿಸಿಐ
ಗೌತಮ್ ಗಂಭೀರ್ | PC : PTI
ಹೊಸದಿಲ್ಲಿ : ಸೀನಿಯರ್ ಪುರುಷರ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ರನ್ನು ನೇಮಕಗೊಳಿಸಿದ ನಂತರ ಬಿಸಿಸಿಐ ನೂತನ ಸಹಾಯಕ ಸಿಬ್ಬಂದಿಗಾಗಿ ಹುಡುಕಾಟ ಮುಂದುವರಿಸಿದೆ.ತಂಡದ ವಿವಿಧ ಹುದ್ದೆಗಾಗಿ ಸ್ವತಃ ಗಂಭೀರ್ ಸೂಚಿಸಿರುವ ಐವರ ಹೆಸರನ್ನು ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆ. ಕೇವಲ ಒಂದು ಹೆಸರನ್ನು ಅನುಮೋದಿಸಿದೆ ಎಂದು ವರದಿಯಾಗಿದೆ.
ಗಂಭೀರ್ ಅವರು ವಿವಿಧ ಹುದ್ದೆಗಳಿಗಾಗಿ ಆರ್.ವಿನಯಕುಮಾರ್, ಮೊರ್ನೆ ಮೊರ್ಕಲ್, ಅಭಿಷೇಕ್ ನಾಯರ್, ರಿಯಾನ್ ಟೆನ್ ಡೊಸ್ಚೆಟ್, ಜಾಂಟಿ ರೋಡ್ಸ್ ಹಾಗೂ ಲಕ್ಷ್ಮೀಪತಿ ಬಾಲಾಜಿ ಹೆಸರನ್ನು ಸೂಚಿಸಿದ್ದರು. ಆದರೆ ಮಂಡಳಿಯು ಈ ಎಲ್ಲ ಆಟಗಾರರ ಪೈಕಿ ಒಬ್ಬರನ್ನು ಮಾತ್ರ ಒಪ್ಪಿಕೊಂಡಿದೆ.
ಸದ್ಯ ಕೋಲ್ಕತಾ ನೈಟ್ ರೈಡರ್ಸ್ ನ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿಷೇಕ್ ನಾಯರ್ ಹೊರತುಪಡಿಸಿ ಗಂಭೀರ್ ಸೂಚಿಸಿರುವ ಎಲ್ಲ ಹೆಸರುಗಳನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ಇಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.
ಈ ಕುರಿತು ಅಧಿಕೃತ ಘೋಷಣೆ ಇನ್ನೂ ಆಗಿಲ್ಲ, ನಾಯರ್ ರನ್ನು ಕೋಚಿಂಗ್ ಸಿಬ್ಬಂದಿಯಾಗಿ ಸೇರ್ಪಡೆಗೊಳಿಸುವಂತೆ ಗಂಭೀರ್ ಮಾಡಿರುವ ಮನವಿಗೆ ಬಿಸಿಸಿಐ ಸಮ್ಮತಿಸಿದೆ.
ಟೀಮ್ ಇಂಡಿಯಾದ ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ಗಾಗಿ ಹುಡುಕಾಟ ಮುಂದುವರಿದಿದೆ. ಮೊರ್ಕೆಲ್, ವಿನಯಕುಮಾರ್, ಬಾಲಾಜಿ, ರೋಡ್ಸ್ ಇಲ್ಲವೇ ಡೊಸ್ಚೆಟ್ರನ್ನು ನೇಮಿಸಲು ಮಂಡಳಿಗೆ ಇಷ್ಟವಿಲ್ಲ. ಈ ಹಿಂದೆ ರವಿ ಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ಗೆ ತಮ್ಮ ಕೋಚಿಂಚ್ ಸಿಬ್ಬಂದಿ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಲಾಗಿತ್ತು. ಆದರೆ ಈ ವಿಚಾರದಲ್ಲಿ ಗಂಭೀರ್ಗೆ ಸ್ವತಂತ್ರ ನೀಡಲಾಗಿಲ್ಲ.
ಭಾರತೀಯ ಕ್ರಿಕೆಟ್ ತಂಡದ ನೂತನ ಬೌಲಿಂಗ್ ಕೋಚ್ ಆಗಿ ಝಹೀರ್ ಖಾನ್ರನ್ನು ನೇಮಿಸಲು ಬಿಸಿಸಿಐ ಬಯಸಿದೆ. ಓರ್ವ ಶ್ರೇಷ್ಠ ವೇಗದ ಬೌಲರ್ ಆಗಿರುವ ಝಹೀರ್ 92 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್ಗಳನ್ನು ಉರುಳಿಸಿದ್ದಾರೆ. ಭಾರತದ ಪರ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ 309 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 610 ವಿಕೆಟ್ಗಳನ್ನು ಪಡೆದಿದ್ದಾರೆ. ಕ್ರಿಕೆಟ್ನ ಓರ್ವ ಶ್ರೇಷ್ಠ ಎಡಗೈ ವೇಗಿ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.
ಬಾಲಾಜಿ ಹೆಸರು ಚರ್ಚೆಯಲ್ಲಿದೆ. ಇವರು 8 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು 27 ವಿಕೆಟ್ಗಳನ್ನು ಪಡೆದಿದ್ದರು. 30 ಏಕದಿನ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದರು.
ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಪರಾಸ್ ಮ್ಹಾಂಬ್ರೆ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿಯು ಮುಗಿದಿದೆ. ಫೀಲ್ಡಿಂಗ್ ಕೋಚ್ ಟಿ.ದಿಲಿಪ್ ಅವರ ಅವಧಿಯನ್ನು ವಿಸ್ತರಿಸಲಾಗಿದೆ.