ಮೊದಲ ಬಾರಿ ಮಹಿಳೆಯರ ಡಬಲ್ಸ್ ಟ್ರೋಫಿ ಎತ್ತಿಹಿಡಿದ ಕೊಕೊ ಗೌಫ್

PC : NDTV
ಪ್ಯಾರಿಸ್ : ಅಮೆರಿಕದ ಆಟಗಾರ್ತಿ ಕೊಕೊ ಗೌಫ್ ಇದೇ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ರವಿವಾರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕಟೆರಿನಾ ಸಿನಿಯಾಕೋವಾ ಜೊತೆಗೂಡಿ ಗೌಫ್ ಈ ಸಾಧನೆ ಮಾಡಿದರು.
ಕಳೆದ ವರ್ಷ ಯು.ಎಸ್. ಓಪನ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದ 20ರ ಹರೆಯದ ಗೌಫ್ ಹಾಗೂ ಝೆಕ್ ಗಣರಾಜ್ಯದ ಸಿನಿಯಾಕೋವಾ ಇಟಲಿಯ ಜಾಸ್ಮಿನ್ ಪಯೊಲಿನಿ ಹಾಗೂ ಸಾರಾ ಎರ್ರಾನಿ ಅವರನ್ನು 7-6(5), 6-3 ಸೆಟ್ಗಳ ಅಂತರದಿಂದ ಮಣಿಸಿದರು.
ಗೌಫ್ ಮೂರನೇ ಬಾರಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಫೈನಲ್ಗೆ ತಲುಪಿದ್ದಾರೆ. 2022ರ ಫ್ರೆಂಚ್ ಓಪನ್ ಹಾಗೂ 2021ರ ಯು.ಎಸ್.ಓಪನ್ ಟೂರ್ನಿಯ ಮಹಿಳೆಯರ ಡಬಲ್ಸ್ ಫೈನಲ್ನಲ್ಲಿ ಗೌಫ್ ಸೋತಿದ್ದರು.
ಮೂರನೇ ಪ್ರಯತ್ನದಲ್ಲಿ ಪ್ರಶಸ್ತಿ ಲಭಿಸಿದೆ. ನನ್ನೊಂದಿಗೆ ಆಡಿದ ಕಟೆರಿನಾಗೆ ಧನ್ಯವಾದ. ಪಂದ್ಯಾವಳಿ ಆರಂಭವಾಗಲು ಎರಡು ದಿನಗಳಿರುವಾಗ ಒಟ್ಟಿಗೆ ಆಡಲು ನಿರ್ಧರಿಸಿದ್ದೆವು. ಅಭಿಮಾನಿಗಳಿಗೂ ಧನ್ಯವಾದ ಎಂದು ಗೌಫ್ ಹೇಳಿದ್ದಾರೆ.
ಜಾಸ್ಮಿನ್ ಪಯೋಲಿನಿ ಪ್ರಸಕ್ತ ಟೂರ್ನಿಯಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಇಗಾ ಸ್ವಿಯಾಟೆಕ್ಗೆ ಸೋಲನುಭವಿಸಿ ರನ್ನರ್ಸ್ ಅಪ್ಗೆ ತೃಪ್ತಿಪಟ್ಟಿದ್ದರು. ಸ್ವಿಯಾಟೆಕ್ ಅವರು ಸಿಂಗಲ್ಸ್ ಸೆಮಿ ಫೈನಲ್ನಲ್ಲಿ ಗೌಫ್ರನ್ನು ಸೋಲಿಸಿದ್ದರು.
ಕಳೆದೆರಡು ವಾರಗಳು ತುಂಬಾ ಚೆನ್ನಾಗಿತ್ತು, ಅತ್ಯಂತ ಭಾವುಕತೆಯಿಂದ ಕೂಡಿತ್ತು. ನನ್ನಲ್ಲಿ ಸಾಕಷ್ಟು ನೆನಪುಗಳಿವೆ ಎಂದು ಪಯೊಲಿನಿ ಹೇಳಿದ್ದಾರೆ.
ಸಾರಾ ಎರ್ರಾನಿ ಈ ಹಿಂದೆ ತನ್ನ ಮಾಜಿ ಜೊತೆಗಾರ್ತಿ ರೊಬರ್ಟಾ ವಿನ್ಸಿ ಜೊತೆ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಇಟಲಿಯ ಜೋಡಿ 2012ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು. ಅದೇ ವರ್ಷ ಎರ್ತಾನಿ ಸಿಂಗಲ್ಸ್ ಫೈನಲ್ನಲ್ಲಿ ಸೋತಿದ್ದರು.