ಪಾಕ್ ಜೊತೆಗಿನ ಭಾರತದ ಪಂದ್ಯಾಟ ರದ್ದು ಪಡಿಸಬೇಕೆಂದು ಕರೆ ನೀಡಿದ್ದ ಗೌತಮ್ ಗಂಭೀರ್ ಅವರಿಂದಲೇ ಕಮೆಂಟರಿ!
"ಬಿಜೆಪಿಯ ಗಂಭೀರ್ ರದ್ದು ಮಾಡಲು ಕರೆ ನೀಡಿದ್ದರು, ಕ್ರಿಕೆಟಿಗ ಗಂಭೀರ್ ಕಮೆಂಟರಿ ಮಾಡುತ್ತಿದ್ದಾರೆ"; ನೆಟ್ಟಿಗರಿಂದ ಟ್ರೋಲ್ ಸುರಿಮಳೆ
Photo: twitter \ @RoshanKrRaii
ಹೊಸದಿಲ್ಲಿ: ಶ್ರೀಲಂಕಾದ ಪಲ್ಲೆಕೆಲೆ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023 ರ ಭಾರತ-ಪಾಕಿಸ್ತಾನ ಪಂದ್ಯಾಟದಲ್ಲಿ ಕಮೆಂಟರಿ ಬಾಕ್ಸ್ನಲ್ಲಿ ಕುಳಿತಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ನೆಟ್ಟಿಗರಿಂದ ಟ್ರೋಲ್ಗೆ ಗುರಿಯಾಗಿದ್ದಾರೆ.
“ಪಾಕಿಸ್ತಾನದೊಂದಿಗಿನ ಸಮಸ್ಯೆಗಳು ಬಗೆಹರಿಯುವವರೆಗೆ ಭಾರತದ ತಂಡ ಪಾಕ್ ಜೊತೆ ಯಾವುದೇ ಕ್ರೀಡಾಕೂಟದಲ್ಲಿ ಭಾಗಿಯಾಗಬಾರದು. ಯಾವುದೇ ಕಾರ್ಯಕ್ರಮವಾಗಲಿ, ಕ್ರಿಕೆಟ್ ಪಂದ್ಯವೇ ಆಗಲಿ ನಮ್ಮ ಸೈನಿಕರ ಪ್ರಾಣಕ್ಕಿಂತ ಮಿಗಿಲಾದದ್ದು ಅಲ್ಲ. ಯಾವುದೇ ಘಟನೆಯು ದೇಶಕ್ಕಿಂತ ದೊಡ್ಡದಲ್ಲ. ಪಾಕಿಸ್ತಾನದೊಂದಿಗಿನ ಪಂದ್ಯವನ್ನು ರದ್ದುಗೊಳಿಸಬೇಕು” ಎಂದು ಕಳೆದ ಮೂರು ವಾರಗಳ ಹಿಂದೆ ಸಂದರ್ಶನವೊಂದರಲ್ಲಿ ಗೌತಮ್ ಗಂಭೀರ್ ಹೇಳಿದ್ದರು ಎನ್ನಲಾಗಿದೆ.
ಬಿಜೆಪಿಯ ಸಂಸದರೂ ಆಗಿರುವ ಗೌತಮ್ ಗಂಭೀರ್ ಅವರು ಸ್ವತಃ ಕ್ರಿಕೆಟಿಗ ಆಗಿಯೂ ಕೂಡಾ ಈ ಹೇಳಿಕೆ ನೀಡಿರುವುದು ಸಾಕಷ್ಟು ಗಮನ ಸೆಳೆದಿತ್ತು. ಆದರೆ, ಇದೀಗ, ಹೇಳಿಕೆ ನೀಡಿ ತಿಂಗಳು ಪೂರ್ತಿ ಆಗುವುದರೊಳಗೆ ಭಾರತ ಹಾಗೂ ಪಾಕ್ ನಡುವಣ ಪಂದ್ಯಾಟಕ್ಕೆ ಕಾಮೆಂಟ್ರಿ ನೀಡಲು ಗಂಭೀರ್ ಅವರು ಉಪಸ್ಥಿತಿ ಇರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿಯ ಸಂಸದರೂ ಆಗಿರುವ ಗೌತಮ್ ಗಂಭೀರ್ ಅವರು ನೆಟ್ಟಿಗರ ಟ್ರೋಲಿಗೆ ಗುರಿಯಾಗಿದ್ದಾರೆ.
“ಇದು ಬಿಜೆಪಿ ಸಂಸದ ಗೌತಮ್ ಗಂಭೀರ್. ಕೆಲವು ವಾರಗಳ ಹಿಂದೆ, ಭಾರತವು ಪಾಕಿಸ್ತಾನದೊಂದಿಗೆ ಆಡುವುದನ್ನು ಅವರು ತೀವ್ರವಾಗಿ ಆಕ್ಷೇಪಿಸಿದ್ದರು. ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಅವರು ಹೇಳಿದ್ದರು. ಆದರೆ, ಇಂದು ಅವರು ಕಾಮೆಂಟರಿ ಬಾಕ್ಸ್ನಲ್ಲಿ ಪಾಕಿಸ್ತಾನಿ ವೇಗದ ಬೌಲರ್ಗಳ ಕಡೆಗೆ ವಿಪರೀತವಾಗಿ ಒಲವು ತೋರುತ್ತಿದ್ದಾರೆ. ಭಾರತದಲ್ಲಿರುವ ಅತ್ಯಂತ ನಾಚಿಕೆಯಿಲ್ಲದ ವ್ಯಕ್ತಿ” ಎಂದು ಗೌತಮ್ ಗಂಭಿರ್ ಅವರು ಪಾಕ್ ಮಾಜಿ ಆಟಗಾರ ವಸೀಮ್ ಅಕ್ರಮ್ ಜೊತೆಗೆ ಕಾಮೆಂಟರಿ ಬಾಕ್ಸ್ ಒಳಗೆ ಕೂತಿರುವ ಚಿತ್ರವನ್ನು ಹಂಚಿಕೊಂಡು ರೋಷನ್ ರೈ ಎಂಬವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೋರ್ವ ನೆಟ್ಟಿಗ, “ರಾಜಕಾರಣಿ ಗೌತಮ್ ಗಂಭೀರ್ ಹಾಗೆ ಹೇಳಿದ್ದರು, ಇದೀಗ ಕ್ರಿಕೆಟಿಗ ಗೌತಮ್ ಗಂಭೀರ್ ಕಾಮೆಂಟ್ರಿ ಮಾಡುತ್ತಿದ್ದಾರೆ. ಕಾಪಟ್ಯಕ್ಕೂ ಒಂದು ಮಿತಿ ಇರುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.
“ಆಗಸ್ಟ್ 12 ರಂದು ಗಂಭೀರ್ ಬಿಜೆಪಿ ಸಂಸದರಂತೆ ವರ್ತಿಸುತ್ತಿದ್ದರು. ಇಂದು ಅವರು ಮಾಜಿ ಕ್ರಿಕೆಟಿಗರಂತೆ ವರ್ತಿಸುತ್ತಿದ್ದಾರೆ” ಎಂದು ಇನ್ನೋರ್ವ ನೆಟ್ಟಿಗ ಟೀಕಿಸಿದ್ದಾರೆ.