ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ತೆಲಂಗಾಣದಿಂದ ರಾಜ್ಯಸಭೆಗೆ ಆಯ್ಕೆ
PC : ANI ಅಭಿಷೇಕ್ ಮನು ಸಿಂಘ್ವಿ
\
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಮಂಗಳವಾರ ತೆಲಂಗಾಣದಿಂದ ರಾಜ್ಯಸಭೆಗೆ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಹಿರಿಯ ಉಪಾಧ್ಯಕ್ಷ ಜಿ ನಿರಂಜನ್ ಅವರು ಸಿಂಘ್ವಿ ಪರವಾಗಿ ಚುನಾವಣಾ ಪ್ರಮಾಣಪತ್ರವನ್ನು ಹೈದರಾಬಾದ್ನಲ್ಲಿ ಚುನಾವಣಾಧಿಕಾರಿಯಿಂದ ಸ್ವೀಕರಿಸಿದರು.
ಸ್ವತಂತ್ರ ಅಭ್ಯರ್ಥಿಯೊಬ್ಬರು ರಾಜ್ಯಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಪರಿಶೀಲನೆ ವೇಳೆ ಅದು ತಿರಸ್ಕೃತಗೊಂಡಿತ್ತು.
ಸಿಂಘ್ವಿ ಅವರು ಕಣದಲ್ಲಿ ಏಕೈಕ ಅಭ್ಯರ್ಥಿಯಾಗಿದ್ದರು. ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕವಾದ ಮಂಗಳವಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು.
ಕೆ ಕೇಶವ ರಾವ್ ಅವರು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ತೊರೆದು ಕಾಂಗ್ರೆಸ್ಗೆ ಸೇರಿದಾಗ ರಾಜ್ಯಸಭೆಗೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಅಭಿಷೇಕ್ ಮನು ಸಿಂಘ್ವಿ ಸ್ಪರ್ಧಿಸಿದ್ದರು. ಈ ವರ್ಷದ ಆರಂಭದಲ್ಲಿ, ಸಿಂಘ್ವಿ ಅವರು ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಚುನಾವಣೆಯಲ್ಲಿ ಸೋತಿದ್ದರು.