"ಭಾರತದ ವಿರುದ್ಧ ಸಂಚು": ವಿನೇಶ್ ಫೋಗಟ್ ಅನರ್ಹತೆ ಕುರಿತು ವಿಜೇಂದರ್ ಸಿಂಗ್ ಪ್ರತಿಕ್ರಿಯೆ
ವಿನೇಶ್ ಫೋಗಟ್ ,ವಿಜೇಂದರ್ ಸಿಂಗ್
ಹೊಸದಿಲ್ಲಿ: 2008ರ ಬೀಜಿಂಗ್ ಪದಕ ವಿಜೇತ ಬಾಕ್ಸಿಂಗ್ಪಟು ವಿಜೇಂದರ್ ಸಿಂಗ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ನಿಂದ ವಿನೇಶ್ ಫೋಗಟ್ ಅನರ್ಹತೆಯ ವಿರುದ್ಧ ಕಿಡಿಕಾರಿದ್ದು, ಆಕೆ ತನ್ನ ಮತ್ತು ಭಾರತದ ಇತರ ಕುಸ್ತಿಪಟುಗಳ ವಿರುದ್ಧ ಪಿತೂರಿಯ ಬಲಿಪಶುವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿನೇಶ್ಗೆ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅವಕಾಶ ನೀಡಬೇಕಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.
ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಹಿರಿಯ ಬಾಕ್ಸಿಂಗ್ಪಟು ವಿಜೇಂದರ್ ಸಿಂಗ್,‘ಇದು ಭಾರತ ಮತ್ತು ಭಾರತೀಯ ಕುಸ್ತಿಪಟುಗಳ ವಿರುದ್ಧ ದೊಡ್ಡ ಪಿತೂರಿಯಾಗಿದೆ. ವಿನೇಶ್ ಪ್ರದರ್ಶನ ಮೆಚ್ಚುವಂಥದ್ದು. ಬಹುಶಃ ಕೆಲವರಿಗೆ ಈ ಸಂತಸವನ್ನು ಅರಗಿಸಿಕೊಳ್ಳಲಾಗಿಲ್ಲ. ಒಂದೇ ರಾತ್ರಿಯಲ್ಲಿ ಐದರಿಂದ ಆರು ಕೆ.ಜಿ.ತೂಕವನ್ನು ನಾವು ಇಳಿಸಿಕೊಳ್ಳಬಹುದು,ಹೀಗಾಗಿ 100 ಗ್ರಾಂ ಹೆಚ್ಚುವರಿ ತೂಕಕ್ಕೆ ಸಮಸ್ಯೆಯೇನಿತ್ತು? ಯಾರಿಗೋ ಏನೋ ಸಮಸ್ಯೆಯಿತ್ತು,ಹೀಗಾಗಿ ವಿನೇಶ್ ಅನರ್ಹತೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ನೂರು ಗ್ರಾಂ ತೂಕವನ್ನು ಇಳಿಸಿಕೊಳ್ಳಲು ಅವರಿಗೆ ಅವಕಾಶ ಸಿಗಬೇಕಿತ್ತು ’ಎಂದು ಹೇಳಿದರು.
ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ನಾನು ಇಂತಹದ್ದನ್ನು ಎಂದೂ ನೋಡಿರಲಿಲ್ಲ ಎಂದರು.
ಒಲಿಂಪಿಕ್ಸ್ನಲ್ಲಿ ಬಾಕ್ಸಿಂಗ್ ಪದಕ ಗೆದ್ದ ಮೊದಲ ಭಾರತೀಯರಾಗಿರುವ ಸಿಂಗ್, ‘ಕ್ರೀಡಾಪಟುಗಳು ಆಹಾರ ಸೇವನೆಗಿಂತ ಚೇತರಿಕೆ ಮತ್ತು ತೂಕ ನಿಯಂತ್ರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ನಮಗೆ ಕಾರ್ಬೊಹೈಡ್ರೇಟ್ಗಳು ಮತ್ತು ಪ್ರೋಟಿನ್ನ ಅಗತ್ಯವಿಲ್ಲ, ನಮಗೆ ಚೇತರಿಕೆ ಮೊದಲು ಬೇಕು. ನಾಳೆ ನಮಗೆ ಪಂದ್ಯವಿದೆ ಎನ್ನುವುದು ನಮಗೆ ಗೊತ್ತಿರುತ್ತದೆ, ಹೀಗಾಗಿ ತೂಕ ನಿಯಂತ್ರಣ ನಮ್ಮ ಆದ್ಯತೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತದೆ. ನಮ್ಮ ಶರೀರವು ದಣಿದಿರುವುದರಿಂದ ನಾವು ನಮ್ಮ ಫಿಜಿಯೊಥೆರಪಿಸ್ಟ್ ಬಳಿ ಹೋಗುತ್ತೇವೆ ಮತ್ತು ನಾವು ಹಸಿವನ್ನು ನಿಯಂತ್ರಿಸಿಕೊಳ್ಳಬಲ್ಲೆವು. ನಾವು ನಮ್ಮ ಚೇತರಿಕೆ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇವೆ, ಆಹಾರ ಸೇವನೆಯ ಮೇಲಲ್ಲ’ ಎಂದು ವಿವರಿಸಿದರು.
ಮಂಗಳವಾರ ವಿನೇಶ್ ಪಾಲಿಗೆ ಸ್ಮರಣೀಯ ದಿನವಾಗಿತ್ತು. ಟೋಕಿಯೊ ಚಿನ್ನದ ಪದಕ ವಿಜೇತೆ ಜಪಾನಿನ ಯುಯಿ ಸುಸಾಕಿ ಅವರನ್ನು ಸೋಲಿಸಿ ಸೆಮಿಫೈನಲ್ಗೆ ಲಗ್ಗೆ ಹಾಕುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ 82 ಸರಣಿ ವಿಜಯಗಳ ಸುಸಾಕಿ ಅವರ ದಿಗ್ವಿಜಯಕ್ಕೆ ಅಂತ್ಯ ಹಾಡಿದ್ದರು. ಸೆಮಿಫೈನಲ್ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಝ್ಮನ್ ಲೋಪೆಝ್ ಅವರನ್ನು ಮಣಿಸಿ ಫೈನಲ್ಗೆ ಪ್ರವೇಶಿಸಿದ್ದರು. ಆದರೆ ಕೇವಲ 100 ಗ್ರಾಂ ಹೆಚ್ಚುವರಿ ತೂಕ ಹೊಂದಿದ್ದ ಕಾರಣದಿಂದ ವಿನೇಶ್ ಅನರ್ಹಗೊಂಡಿದ್ದರಿಂದ ಈಗ ಸಾಕ್ಷಿ ಮಲಿಕ್ ಕುಸ್ತಿ ಸ್ಪರ್ಧೆಗಳಲ್ಲಿ ಉಳಿದುಕೊಂಡಿರುವ ಭಾರತದ ಏಕೈಕ ಒಲಿಂಪಿಕ್ ಪದಕ ವಿಜೇತೆಯಾಗಿದ್ದಾರೆ.