ಅಹ್ಮದಾಬಾದ್ ನಲ್ಲಿ ಕ್ರಿಕೆಟ್ ಜ್ವರ, ಆಸ್ಪತ್ರೆಯಲ್ಲಿ ನೂಕುನುಗ್ಗಲು
Photo : AFP
ಹೊಸದಿಲ್ಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ವಿಶ್ವಕಪ್ ಗ್ರೂಪ್ ಪಂದ್ಯ ಸಮೀಪಿಸುತ್ತಿರುವಂತೆಯೇ ಅಹ್ಮದಾಬಾದ್ ನಗರದಲ್ಲಿ ಕ್ರಿಕೆಟ್ ಜ್ವರ ಆವರಿಸಿದೆ. ಆರೋಗ್ಯ ತಪಾಸಣೆ ಹಾಗೂ ವಸತಿಯ ನೆಪದಲ್ಲಿ ಸ್ಟೇಡಿಯಮ್ ಪಕ್ಕದಲ್ಲಿರುವ ಆಸ್ಪತ್ರೆಗಳಿಗೆ ಜನರು ಧಾವಿಸುತ್ತಿದ್ದಾರೆ.
ಒಂದು ರಾತ್ರಿ ತಂಗುವಿಕೆ ಒಳಗೊಂಡಂತೆ ಚೆಕ್ ಅಪ್ ಪ್ಯಾಕೇಜ್ ಗಳನ್ನು ಕಾಯ್ದಿರಿಸುವ ರೋಗಿಗಳ ಸಂಖ್ಯೆ ಹಲವಾರು ಆಸ್ಪತ್ರೆಗಳಲ್ಲಿ ಹಠಾತ್ ಹೆಚ್ಚಾಗಿರುವ ಕುರಿತು ವರದಿಯಾಗಿದೆ. ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯದ ವೇಳೆಯೇ ಈ ಬೆಳವಣಿಗೆ ನಡೆದಿದೆ. ಗಗನಕ್ಕೇರುತ್ತಿರುವ ಹೊಟೇಲ್ ಕೊಠಡಿಯ ಬೆಲೆಯಿಂದಾಗಿ ಕೈಗೆಟುಕುವ ವಸತಿ ಸೌಕರ್ಯಗಳನ್ನು ಪಡೆದುಕೊಳ್ಳಲು ಕೆಲವರು ಈ ಹೊಸ ವಿಧಾನದ ಮೊರೆ ಹೋಗಿದ್ದಾರೆ. ಭಾರತ-ಪಾಕ್ ಪಂದ್ಯದ ಹಿನ್ನೆಲೆಯಲ್ಲಿ ಹೊಟೇಲ್ ಕೋಣೆಯ ದರವು ಸಾಮಾನ್ಯಕ್ಕಿಂತ 20 ಪಟ್ಟು ಹೆಚ್ಚಾಗಿದೆ.
ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಬರಲಿರುವ ಜನರು ಆರೋಗ್ಯ ತಪಾಸಣೆಗಾಗಿ ಅಪಾಯಿಂಟ್ಮೆಂಟ್ ಪಡೆದುಕೊಂಡು ಆಸ್ಪತ್ರೆಗಳಲ್ಲಿ ಉಳಿದುಕೊಂಡಿರುವ ಕೆಲವು ಪ್ರಕರಣಗಳನ್ನು ನಾವು ನೋಡಿದ್ದೇವೆ ಎಂದು ಅಹ್ಮದಾಬಾದ್ ಮೆಡಿಕಲ್ ಅಸೋಸಿಯೇಶನ್ ತುಷಾರ್ ಪಟೇಲ್ ಸುದ್ದಿಸಂಸ್ಥೆ ರಾಯಿಟರ್ಸ್ ಗೆ ತಿಳಿಸಿದ್ದಾರೆ.
ಭಾರತ-ಪಾಕ್ ಕ್ರಿಕೆಟ್ ಪಂದ್ಯದ ಟಿಕೆಟ್ ಗಳಿಗೂ ಭಾರೀ ಬೇಡಿಕೆ ಇದೆ. ಆಗಸ್ಟ್ ನಲ್ಲಿ ಮೊದಲ ಬಾರಿ ಟಿಕೆಟ್ ಮಾರಾಟಕ್ಕಿಟ್ಟಾಗ ಅದು ಒಂದು ಗಂಟೆಯೊಳಗೆ ಬಿಕರಿಯಾಗಿತ್ತು. ಬಿಸಿಸಿಐ ಈ ತಿಂಗಳಾರಂಭದಲ್ಲಿ 14,000 ಹೆಚ್ಚುವರಿ ಟಿಕೆಟ್ ಗಳನ್ನು ಬಿಡುಗಡೆ ಮಾಡಿದೆ.
ಈ ಪಂದ್ಯದ ಜನಪ್ರಿಯತೆಯು ಟಿಕೆಟ್ ಮರು ಮಾರಾಟದ ಬೆಲೆಗಳು ಅವುಗಳ ಮುಖಬೆಲೆಗಿಂತ 25 ಪಟ್ಟು ಹೆಚ್ಚಾಗಲು ಕಾರಣವಾಗಿದ್ದು, ಸ್ಥಳೀಯ ಅಧಿಕಾರಿಗಳು ನಕಲಿ ಟಿಕೆಟ್ ಗಳ ಮಾರಾಟದ ವಿರುದ್ಧ ಕ್ರಮಕೈಗೊಳ್ಳುತ್ತಿದ್ದಾರೆ. ವಿಮಾನ ದರವು 4 ಪಟ್ಟು ಹೆಚ್ಚಾಗಿದೆ. ಮುಂಬೈ ಹಾಗೂ ಅಹ್ಮದಾಬಾದ್ ಸಂಪರ್ಕಿಸಲು ಭಾರತೀಯ ರೈಲ್ವೆಯು ಹೆಚ್ಚುವರಿ ಸೂಪರ್-ಫಾಸ್ಟ್ ರೈಲುಗಳನ್ನು ನಿಗದಿಪಡಿಸಿದೆ.