2028ರ ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆ ಪ್ರಸ್ತಾವ: ಐಸಿಸಿ ಹರ್ಷ
Photo: olympics.com
ಹೊಸದಿಲ್ಲಿ: ಲಾಸ್ಎಂಜಲೀಸ್ ನಲ್ಲಿ 2028ರಲ್ಲಿ ನಡೆಯುವ ಒಲಿಂಪಿಕ್ಸ್ ಕೂಟದಲ್ಲಿ ಕ್ರಿಕೆಟನ್ನು ಸೇರ್ಪಡೆ ಮಾಡುವ ಪ್ರಸ್ತಾವವನ್ನು ಸಂಘಟಕರು ಮುಂದಿಟ್ಟಿರುವ ಕ್ರಮವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸ್ವಾಗತಿಸಿದೆ.
ಎಲ್ಎ28 ಸಂಘಟನಾ ಸಮಿತಿ ಮತ್ತು ಐಸಿಸಿ ಸಹಭಾಗಿತ್ವದಲ್ಲಿ ಪ್ರಯತ್ನಗಳು ನಡೆದು ಎರಡು ವರ್ಷಗಳ ಸಮಗ್ರ ಪ್ರಕ್ರಿಯೆ ಬಳಿಕ, ಲಾಸ್ಎಂಜಲೀಸ್ ಕೂಟದಲ್ಲಿ ಸೇರ್ಪಡೆಯಾಗುವ ಕ್ರೀಡೆಯಲ್ಲಿ ಕ್ರಿಕೆಟ್ ಕೂಡಾ ಸೇರಿದೆ. ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಕ್ರಿಕೆಟ್ ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ಮಾಡಿರುವುದು ಐತಿಹಾಸಿಕ ಮೈಲುಗಲ್ಲು ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬರ್ಕ್ಲೇ ಹೇಳಿಕೆ ನೀಡಿದ್ದಾರೆ.
ಇದು ಅಂತಿಮ ನಿರ್ಧಾರವಲ್ಲದಿದ್ದರೂ, ಒಲಿಂಪಿಕ್ಸ್ ನಲ್ಲಿ ಕ್ರಿಕೆಟನ್ನು ನೋಡುವ ನಿಟ್ಟಿನಲ್ಲಿ ಕಳೆದ ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಇದೊಂದು ಮಹತ್ವದ ಮೈಲುಗಲ್ಲು. ಕಳೆದ ಎರಡು ವರ್ಷಗಳ ಕಾಲ ಐಸಿಸಿ ಜತೆ ಸಹಭಾಗಿತ್ವದಲ್ಲಿ ಕೆಲಸ ಮಾಡಿದ ಎಲ್ಎ28 ಸಮಿತಿಯನ್ನು ಅಭಿನಂದಿಸುತ್ತೇನೆ. ಭಾರತದಲ್ಲಿ ನಡೆಯುತ್ತಿರುವ ಪುರುಷರ ವಿಶ್ವಕಪ್ ಪಂದ್ಯಾವಳಿ ವೇಳೆ ಅಂದರೆ ಮುಂದಿನ ವಾರ ನಡೆಯುವ ಐಓಸಿ ಅಧಿವೇಶನದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಲಿಂಪಿಕ್ಸ್ ಮತ್ತು ಕ್ರಿಕೆಟ್ ಗೆ ಐತಿಹಾಸಿಕ ಸಂಬಂಧ ಇದೆ. 1900ರ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಒಂದು ಬಾರಿ ಮಾತ್ರ ಕ್ರಿಕೆಟ್ ಕಾಣಿಸಿಕೊಂಡಿತ್ತು. ಆಗ ಫ್ರಾನ್ಸ್ ಹಾಗೂ ಇಂಗ್ಲೆಂಡ್ ಚಿನ್ನದ ಪದಕಕ್ಕಾಗಿ ಸೆಣೆಸಿದ್ದವು. 2028ರ ಒಲಿಂಪಿಕ್ಸ್ ನಲ್ಲಿ ಪುರುಷರ ಹಾಗೂ ಮಹಿಳೆಯರ ಟಿ20 ಕ್ರಿಕೆಟ್ ಸ್ಪರ್ಧೆಗಳನ್ನು ಸೇರಿಸಲು ಉದ್ದೇಶಿಸಲಾಗಿದೆ. ಇದು ಒಲಿಂಪಿಕ್ಸ್ ಗೆ ಏಷ್ಯಾವನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವಲ್ಲಿ ಐಓಸಿಗೆ ನೆರವಾಗಲಿದೆ.