ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ 11,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ನಿಯೋಜನೆ
ವಿಶ್ವಕಪ್ ಕ್ರಿಕೆಟ್ 2023
PHOTO : PTI
ಅಹಮದಾಬಾದ್: ಅಕ್ಟೋಬರ್ 14ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಗುಜರಾತ್ ಪೊಲೀಸ್, ರಾಷ್ಟ್ರೀಯ ಭದ್ರತಾ ಪಡೆಗಳು, ಕ್ಷಿಪ್ರ ಸಶಸ್ತ್ರ ಪಡೆಗಳು ಹಾಗೂ ಗೃಹ ರಕ್ಷಕ ದಳ ಸೇರಿದಂತೆ ವಿವಿಧ ಭದ್ರತಾ ಸಂಸ್ಥೆಗಳ 11,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದು ಸೋಮವಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪಂದ್ಯಕ್ಕೆ ಭದ್ರತಾ ಅಪಾಯಗಳಿರುವುದರಿಂದ ಉನ್ನತ ಮಟ್ಟದ ಭದ್ರತೆಯನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ 20 ವರ್ಷಗಳಲ್ಲಿ ಅಹಮದಾಬಾದ್ ನಲ್ಲಿ ಕ್ರಿಕೆಟ್ ಪಂದ್ಯಗಳು ನಡೆದಾಗ ಯಾವುದೇ ಕೋಮು ಹಿಂಸಾಚಾರಗಳಿಗೆ ಈ ನಗರವು ಸಾಕ್ಷಿಯಾಗಿರದಿದ್ದರೂ, ಮುಂಜಾಗ್ರತಾ ಕ್ರಮವಾಗಿ ವಿವಿಧ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್.ಮಲಿಕ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಭಾರತ ಮತ್ತು ಪಾಕಿಸ್ತಾನ ನಡುವಿನ ಭಾರಿ ನಿರೀಕ್ಷೆಯ ಪಂದ್ಯವು ಯಾವುದೇ ಸಮಸ್ಯೆಯಿಲ್ಲದೆ ಮುಗಿದು ಹೋಗುವುದನ್ನು ಖಾತ್ರಿಪಡಿಸಲು ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗೃಹ ಖಾತೆಯ ರಾಜ್ಯ ಸಚಿವ ಹರ್ಷ್ ಸಾಂಘ್ವಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ವಿಕಾಸ್ ಸಹಾಯ್, ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್.ಮಲಿಕ್ ಸೇರಿದಂತೆ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪೊಲೀಸರ ಕ್ರಿಯಾ ಯೋಜನೆಯ ಬಗ್ಗೆ ಪರಾಮರ್ಶೆ ನಡೆಸಿದರು.
ಸೋಮವಾರ ಸಂಜೆ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ಮಲಿಕ್, ಭದ್ರತಾ ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿಗಳು ಪರಾಮರ್ಶೆ ನಡೆಸಿದ್ದು, ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕ್ರೀಡಾಂಗಣಕ್ಕೆ ಬರುವ ಸಾಧ್ಯತೆ ಹಾಗೂ ಇತ್ತೀಚೆಗೆ ಅಪರಿಚಿತ ವ್ಯಕ್ತಿಗಳು ಇಮೇಲ್ ಮೂಲಕ ಒಡ್ಡಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ವಿಸ್ತೃತ ಭದ್ರತಾ ವ್ಯವಸ್ಥೆಗಳನ್ನು ಏರ್ಪಾಡು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
“ಪಂದ್ಯದ ವೇಳೆ ಕ್ರೀಡಾಂಗಣದ ಸುರಕ್ಷತೆಗಾಗಿ 7,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಗರದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸುಮಾರು 4,000 ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿಗಳೊಂದಿಗೆ ನಾವು ಮೂರು ದಾಳಿ ತಂಡಗಳು ಹಾಗೂ ಒಂದು ರಾಷ್ಟ್ರೀಯ ಭದ್ರತಾ ಪಡೆಯ ಡ್ರೋನ್ ನಿಗ್ರಹ ದಳವನ್ನು ನಿಯೋಜಿಸಲಿದ್ದೇವೆ. ಇದರೊಂದಿಗೆ ನಮ್ಮ ಒಂಭತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ ತಂಡಗಳನ್ನೂ ಬಳಸಿಕೊಳ್ಳಲಾಗುವುದು” ಎಂದು ಪೊಲೀಸ್ ಆಯುಕ್ತ ಮಲಿಕ್ ತಿಳಿಸಿದ್ದಾರೆ.
ಪಂದ್ಯದ ವೇಳೆ 21 ಉಪ ಪೊಲೀಸ್ ಆಯುಕ್ತರೊಂದಿಗೆ ಪೊಲೀಸ್ ಮಹಾ ನಿರೀಕ್ಷಕ ಶ್ರೇಣಿಯ ನಾಲ್ಕು ಹಿರಿಯ ಐಪಿಎಸ್ ಅಧಿಕಾರಿಗಳು ಮತ್ತು ಉಪ ಪೊಲೀಸ್ ನಿರೀಕ್ಷಕರು ಭದ್ರತಾ ಸಿಬ್ಬಂದಿಗಳ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನದ ಹೊಣೆಯನ್ನು ಹೊತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
“ನಮ್ಮ ಭದ್ರತಾ ವ್ಯವಸ್ಥೆಯ ಭಾಗವಾಗಿ ರಾಜ್ಯ ಮೀಸಲು ಪೊಲೀಸ್ ಪಡೆಯ 13 ತುಕಡಿಗಳಲ್ಲದೆ ಮೂರು ಕ್ಷಿಪ್ರ ಕಾರ್ಯಪಡೆಯ ತುಕಡಿಗಳನ್ನು ನಿಯೋಜಿಸಲಾಗುವುದು. ಕ್ಷಿಪ್ರ ಕಾರ್ಯಪಡೆಯು ನಗರದ ಕೋಮು ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಲಿದೆ. ಕಾಲ್ತುಳಿತವೇನಾದರೂ ಸಂಭವಿಸಿದರೆ, ಜನರಿಗೆ ನೆರವಾಗಲು ನಾವೀಗಾಗಲೇ ತೆರವು ಯೋಜನೆಯನ್ನು ಸಿದ್ಧಪಡಿಸಿದ್ದು, ಕ್ರೀಡಾಂಗಣದಲ್ಲಿ ಈ ಯೋಜನೆಯ ತಾಲೀಮು ಕೂಡಾ ನಡೆಯುತ್ತಿದೆ” ಎಂದು ಮಲಿಕ್ ತಿಳಿಸಿದ್ದಾರೆ.
ಪಂದ್ಯದ ವೇಳೆ ಯಾವುದೇ ಬಗೆಯ ರಾಸಾಯನಿಕ, ಜೈವಿಕ, ಕ್ಷಕಿರಣ ಮತ್ತು ಪರಮಾಣು ತುರ್ತುಗಳಿಗೆ ಸ್ಪಂದಿಸಲು ನಗರದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನೂ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.
ವರದಿಗಳ ಪ್ರಕಾರ, ಅಪರಿಚಿತನೊಬ್ಬ ಪ್ರಧಾನಿಯನ್ನು ಹತ್ಯೆಗೈಯ್ಯುತ್ತೇನೆ ಹಾಗೂ ನರೇಂದ್ರ ಮೋದಿ ಕ್ರೀಡಾಂಗಣವನ್ನು ಸ್ಫೋಟಿಸುತ್ತೇನೆ ಎಂದು ಕಳಿಸಿರುವ ಈ-ಮೇಲ್ ಅನ್ನು ಮುಂಬೈ ಪೊಲೀಸರು ಸ್ವೀಕರಿಸಿದ್ದಾರೆ. ಇಮೇಲ್ ರವಾನೆದಾರನು ರೂ. 500 ಕೋಟಿ ನೀಡುವಂತೆ ಹಾಗೂ ಕುಖ್ಯಾತ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿಯನ್ನು ಬಿಡುಗಡೆ ಮಾಡುವಂತೆಯೂ ಆಗ್ರಹಿಸಿದ್ದಾನೆ.
ಇಂತಹ ಬೆದರಿಕೆಗಳನ್ನು ನಗರ ಪೊಲೀಸರು ಸೂಕ್ತವಾಗಿ ಮೌಲ್ಯಮಾಪನ ಮಾಡಿದ್ದು, ಈ ಬೆದರಿಕೆಯನ್ನು ವಿದೇಶಿ ನೆಲದಿಂದ ಕಳಿಸಿರುವುದು ಪತ್ತೆಯಾಗಿದೆ ಎಂದು ಮಲಿಕ್ ತಿಳಿಸಿದ್ದಾರೆ.
“ನಾವು ಇಂತಹ ಬೆದರಿಕೆಗಳನ್ನು ಮೌಲ್ಯಮಾಪನ ಮಾಡಿದ್ದು, ಅದಕ್ಕೆ ತಕ್ಕಂತೆ ನಮ್ಮ ನಿಯೋಜನೆ ಯೋಜನೆಗಳನ್ನು ಮಾಡಿಕೊಂಡಿದ್ದೇವೆ. ಇದಲ್ಲದೆ, ಪಂದ್ಯವನ್ನು ವೀಕ್ಷಿಸಲು ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುವುದರಿಂದ ಇಂತಹ ವಿಸ್ತೃತ ಭದ್ರತಾ ವ್ಯವಸ್ಥೆ ಕೈಗೊಳ್ಳುವುದು ಅನಿವಾರ್ಯ” ಎಂದು ಅವರು ಪ್ರತಿಪಾದಿಸಿದ್ದಾರೆ.
“ಇದೊಂದು ಸೂಕ್ಷ್ಮ ಪಂದ್ಯವಾಗಿರುವುದನ್ನು ನಾವು ಪರಿಗಣಿಸಿದ್ದು, ಇದರಿಂದ ಕೋಮು ಉದ್ವಿಗ್ನತೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ನಗರ ಪೊಲೀಸರು ಸರ್ವಸನ್ನದ್ಧರಾಗಿದ್ದಾರೆ” ಎಂದು ಮಲಿಕ್ ತಿಳಿಸಿದ್ದಾರೆ.