ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ 6 ವಿಕೆಟ್ ಜಯ: ಮೆಹಿದಿ ಹಸನ್ ಮಿರಾಜ್ ಆಲ್ರೌಂಡ್ ಆಟ
Photo :twitter/ICC
ಧರ್ಮಶಾಲಾ: ಮೆಹಿದಿ ಹಸನ್ ಮಿರಾಜ್ ಆಲ್ರೌಂಡ್ ಆಟದ(57 ರನ್, 3/25)ನೆರವಿನಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡ ಅಫ್ಘಾನಿಸ್ತಾನ ತಂಡದ ವಿರುದ್ಧ 6 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿದೆ.
ಶನಿವಾರ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಗೆಲ್ಲಲು 157 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡ 34.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಗೆಲುವಿನ ದಡ ಸೇರಿತು.
ಬಾಂಗ್ಲಾವು 4.1ನೇ ಓವರ್ನಲ್ಲಿ ಆರಂಭಿಕ ಆಟಗಾರರಾದ ತಂಝೀದ್ ಹಸನ್ (5 ರನ್) ಹಾಗೂ ಲಿಟನ್ ದಾಸ್(13 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ಜೊತೆಯಾದ ಉಪ ನಾಯಕ ನಜ್ಮುಲ್ಹುಸೈನ್ ಶಾಂಟೊ(ಔಟಾಗದೆ 59 ರನ್, 83 ಎಸೆತ, 3 ಬೌಂಡರಿ, 1 ಸಿಕ್ಸರ್)ಹಾಗೂ ಮೆಹಿದಿ ಹಸನ್ ಮಿರಾಝ್(57 ರನ್, 73 ಎಸೆತ, 5 ಬೌಂಡರಿ) ಮೂರನೇ ವಿಕೆಟಿಗೆ 97 ರನ್ ಸೇರಿಸಿ ತಂಡವನ್ನು ಆಧರಿಸಿದರು.
*ಅಫ್ಘಾನಿಸ್ತಾನ 156 ರನ್ಗೆ ಆಲೌಟ್: ಆಲ್ರೌಂಡರ್ಗಳಾದ ಮೆಹಿದಿ ಹಸನ್ ಹಾಗೂ ಶಕೀಬ್ ಅಲ್ ಹಸನ್ (3-30) ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ 37.2 ಓವರ್ಗಳಲ್ಲಿ 156 ರನ್ಗೆ ಆಲೌಟಾಯಿತು. ಅಫ್ಘಾನ್ ಪರ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ (47 ರನ್, 62 ಎಸೆತ, 4 ಬೌಂಡರಿ, 1 ಸಿಕ್ಸರ್)ಏಕಾಂಗಿ ಹೋರಾಟ ನೀಡಿದರು. ಇಬ್ರಾಹೀಂ ಝದ್ರಾನ್(22 ರನ್) ಹಾಗೂ ಅಝ್ಮತುಲ್ಲಾ ಒಮರ್ಝೈ(22 ರನ್)ಎರಡಂಕೆಯ ಸ್ಕೋರ್ ಗಳಿಸಿದರು.