ವಿಶ್ವಕಪ್ ಅಂಕಪಟ್ಟಿ: ಪಾಕಿಸ್ತಾನದ ಸೆಮೀಸ್ ಹಾದಿ ದುರ್ಗಮ
Photo: Twitter/CricCrazyJohns
ಚೆನ್ನೈ: ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಹುತೇಕ ವಿಜಯದ ಮೆಟ್ಟಲು ತಲುಪಿತ್ತು. ರೋಚಕ ಹೋರಾಟದಲ್ಲಿ ಬಾಬರ್ ಅಝಂ ನೇತೃತ್ವದ ತಂಡ ಒಂದು ವಿಕೆಟ್ನಿಂದ ಸೋಲು ಒಪ್ಪಿಕೊಳ್ಳುವ ಮೂಲಕ ವಿಶ್ವಕಪ್ ಅಭಿಯಾನದಲ್ಲಿ ಪಾಕಿಸ್ತಾನದ ಮುಂದಿನ ಪಯಣದ ಹಾದಿ ಬಹುತೇಕ ಮುಚ್ಚಿದಂತಾಗಿದೆ.
ಆರು ಪಂದ್ಯಗಳಿಂದ ನಾಲ್ಕು ಅಂಕ ಸಂಪಾದಿಸಿರುವ ಪಾಕಿಸ್ತಾನ ಸದ್ಯಕ್ಕೆ ಆರನೇ ಸ್ಥಾನದಲ್ಲಿದೆ. ಅಜೇಯ ಭಾರತ ಹಾಗೂ ಒಂದು ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಲಾ 10 ಅಂಕ ಪಡೆದಿದ್ದರೂ ಉತ್ತಮ ನಿವ್ವಳ ರನ್ರೇಟ್ ಆಧಾರದಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನಿಯಾಗಿದೆ. ನ್ಯೂಜಿಲೆಂಡ್ (8 ಅಂಕ) ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ (6) ಹಾಗೂ ಶ್ರೀಲಂಕಾ (4) ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನಗಳಲ್ಲಿವೆ.
ಪಾಕಿಸ್ತಾನದಷ್ಟೇ ಅಂಕ ಸಂಪಾದಿಸಿರುವ ಅಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಬಾಂಗ್ಲಾ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನೆದರ್ಲೆಂಡ್ಸ್ ಕ್ರಮವಾಗಿ ಕೊನೆಯ ಮೂರುಸ್ಥಾನಗಳನ್ನು ಹಂಚಿಕೊಂಡಿವೆ.
ದಕ್ಷಿಣ ಆಫ್ರಿಕಾದ ರೋಚಕ ಗೆಲುವಿನಿಂದಾಗಿ ಏಷ್ಯಾದ ಬಲಿಷ್ಠ ತಂಡವೊಂದು ನಾಕೌಟ್ ಹಂತದಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಪಾಕಿಸ್ತಾನವನ್ನು 270 ರನ್ಗಳಿಗೆ ನಿಯಂತ್ರಿಸಿದ ದಕ್ಷಿಣ ಆಫ್ರಿಕಾ 47.2 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು. ಐಡೆನ್ ಮಾಕ್ರ್ರಂ 91 ಎಸೆತಗಳಲ್ಲಿ 93 ರನ್ ಗಳಿಸಿ ವಿಜಯದ ರೂವಾರಿ ಎನಿಸಿದರು.