ಫೆಲಸ್ತೀನ್ ಪರ ಟಿಶರ್ಟ್ ಧರಿಸಿ ವಿಶ್ವಕಪ್ ಫೈನಲ್ ಮೈದಾನಕ್ಕೆ ನುಗ್ಗಿದ್ದ ಆಸ್ಟ್ರೇಲಿಯಾ ಪ್ರಜೆ ಪೊಲೀಸ್ ಕಸ್ಟಡಿಗೆ

Photo: PTI
ಅಹಮದಾಬಾದ್: ನವೆಂಬರ್ 19ರಂದು ನಡೆದ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಫೆಲೆಸ್ತೀನ್ ಪರ ಟಿ ಶರ್ಟ್ ತೊಟ್ಟು ಪಿಚ್ ಬಳಿಗೆ ಓಡಿ ಬಂದಿದ್ದ ಆಸ್ಟ್ರೇಲಿಯಾ ಪ್ರಜೆಯೊಬ್ಬನನ್ನು ನವೆಂಬರ್ 20ರಂದು ಗಾಂಧಿನಗರ ನ್ಯಾಯಾಲಯವು ಒಂದು ದಿನ ಪೊಲೀಸರ ವಶಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾನೀಯ ವಿರಾಮಕ್ಕೆ ಕೆಲವೇ ಹೊತ್ತಿರುವಾಗ ಸುಮಾರು 3 ಗಂಟೆಯ ವೇಳೆಗೆ ಆಸ್ಟ್ರೇಲಿಯಾ ಪ್ರಜೆ ವೆನ್ ಜಾನ್ಸನ್ (24) ಪಿಚ್ ನೆಡೆಗೆ ಓಡಿ ಬಂದಿದ್ದರು. ಕೂಡಲೇ ವಿರಾಟ್ ಕೊಹ್ಲಿಯತ್ತ ಧಾವಿಸುತ್ತಿದ್ದ ಆತನನ್ನು ಭದ್ರತಾ ಸಿಬ್ಬಂದಿಗಳು ಸೆರೆ ಹಿಡಿದಿದ್ದರು.
ನಂತರ ಆತನನ್ನು ಬಂಧಿಸಿದ್ದ ಚಾಂದ್ ಖೇಡಾ ಠಾಣೆ ಪೊಲೀಸರು, ಆತನ ವಿರುದ್ಧ ಭಾರತ ದಂಡ ಸಂಹಿತೆಯ ಸೆಕ್ಷನ್ 477 (ಕ್ರಿಮಿನಲ್ ಅತಿಕ್ರಮಣ) ಹಾಗೂ ಸೆಕ್ಷನ್ 332 (ಸಾರ್ವಜನಿಕ ಸೇವಕರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದಾದ ನಂತರ, ನಗರ ಪೊಲೀಸ್ ಆಯುಕ್ತರು ಚಾಂದ್ ಖೇಡಾ ಪೊಲೀಸ್ ಠಾಣೆಯಿಂದ ಅಪರಾಧ ವಿಭಾಗಕ್ಕೆ ಪ್ರಕರಣವನ್ನು ವರ್ಗಾಯಿಸಿದ್ದರು. ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ಗಾಂಧಿನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಮುಂದಿನ ತನಿಖೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.
ನವೆಂಬರ್ 20ರಂದು ಅಪರಾಧ ವಿಭಾಗವು ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಇದಕ್ಕೂ ಮುನ್ನ ಫಿಫಾ ಮಹಿಳೆಯರ ಫುಟ್ ಬಾಲ್ ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲೂ ಉಕ್ರೇನ್ ಬೆಂಬಲಿಸಿ ಜಾನ್ಸನ್ ಮೈದಾನದೊಳಗೆ ನುಗ್ಗಿದ್ದ. ಹಾಗೆಯೇ, 2020ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ನಡೆದಿದ್ದ ‘ಸ್ಟೇಟ್ ಆಫ್ ಒರಿಜಿನ್ III’ ರಗ್ಬಿ ಪಂದ್ಯದ ಸಂದರ್ಭದಲ್ಲೂ ಆತ ಮೈದಾನದೊಳಗೆ ನುಗ್ಗಿದ್ದ ಎಂದು ಹೇಳಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ತಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಎಂದು ಜಾನ್ಸನ್ ಹೇಳಿಕೆ ನೀಡಿದ್ದಾನೆ ಎಂದು ಹೇಳಲಾಗಿದೆ.