ಪಾಕಿಸ್ತಾನ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಸಾಕಿಬ್ ಮಹ್ಮೂದ್ಗೆ ಭಾರತ ಪ್ರವಾಸಕ್ಕೆ ಇನ್ನೂ ಲಭಿಸಿಲ್ಲ ವೀಸಾ: ವರದಿ
ಸಾಕಿಬ್ ಮಹ್ಮೂದ್ | PC : PTI
ಹೊಸದಿಲ್ಲಿ : ಪಾಕಿಸ್ತಾನ ಮೂಲದ ಇಂಗ್ಲೆಂಡ್ ಕ್ರಿಕೆಟಿಗ ಸಾಕಿಬ್ ಮಹ್ಮೂದ್ಗೆ ಭಾರತ ಪ್ರವಾಸ ಕೈಗೊಳ್ಳಲು ಇನ್ನೂ ವೀಸಾ ಲಭಿಸದ ಕಾರಣ ಇಂಗ್ಲೆಂಡ್ ಕ್ರಿಕೆಟ್ ತಂಡ ಅಡಚಣೆ ಎದುರಿಸುವಂತಾಗಿದೆ ಎಂದು ವರದಿಯಾಗಿದೆ.
ಮೊದಲ ಟಿ-20 ಪಂದ್ಯ ಆರಂಭವಾಗಲು ಕೆಲವೇ ದಿನಗಳು ಇರುವಾಗ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಮಹ್ಮೂದ್ ಅವರ ವಿಮಾನ ಟಿಕೆಟ್ ರದ್ದುಪಡಿಸಿದೆ.
ಇಂಗ್ಲೆಂಡ್ ತಂಡ 5 ಪಂದ್ಯಗಳ ಟಿ-20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಸರಣಿಯ ಮೊದಲ ಪಂದ್ಯವು ಜನವರಿ 22ರಂದು ಕೋಲ್ಕತಾದ ಈಡನ್ಗಾರ್ಡನ್ಸ್ ಸ್ಟೇಡಿಯಮ್ನಲ್ಲಿ ನಡೆಯಲಿದೆ.
ಮಹ್ಮೂದ್ ಕಳೆದ ಗುರುವಾರ ಯುಎಇನಲ್ಲಿ ವೇಗದ ಬೌಲಿಂಗ್ ಶಿಬಿರಕ್ಕೆ ತೆರಳಬೇಕಾಗಿತ್ತು. ಆದರೆ ಅವರು ಭಾರತ ಪ್ರವಾಸಕ್ಕೆ ತೆರಳಲು ಸಾಧ್ಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ಪಾಸ್ಪೋರ್ಟ್ ಇನ್ನೂ ಭಾರತೀಯ ರಾಯಭಾರ ಕಚೇರಿಯಲ್ಲಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಬ್ರಿಟಿಷ್-ಪಾಕಿಸ್ತಾನಿ ದಂಪತಿಯ ಪುತ್ರನಾಗಿರುವ ಮಹ್ಮೂದ್ ಅವರು ಕಳೆದ ಕೆಲವು ದಿನಗಳಿಂದ ಗೊಂದಲದಲ್ಲಿದ್ದು, ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಇದೇ ಶುಕ್ರವಾರ ಇಂಗ್ಲೆಂಡ್ ತಂಡದ ಉಳಿದ ಆಟಗಾರರು ತೆರಳುವಾಗ ಅವರೊಂದಿಗೆ ಹೋಗಲು ಅವರಿಗೆ ಅನುಮತಿ ನೀಡಲಾಗುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಮಹ್ಮೂದ್ ಸಹ ಅಟಗಾರರಾದ ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸ್ ಹಾಗೂ ಮಾರ್ಕ್ ವುಡ್ ಅವರು ಅಬುಧಾಬಿಯಲ್ಲಿ ವೇಗದ ಬೌಲಿಂಗ್ ತರಬೇತುದಾರ ಜೇಮ್ಸ್ ಆ್ಯಂಡರ್ಸನ್ರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.
ಮಹ್ಮೂದ್ ಅವರು ನವೆಂಬರ್ನಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ಇಂಡೀಸ್ ಪ್ರವಾಸ ಕೈಗೊಂಡಿದ್ದಾಗ ಪುರುಷರ ಕ್ರಿಕೆಟ್ ಸರಣಿಯಲ್ಲಿ ಪವರ್ಪ್ಲೇ ವೇಳೆ ಗರಿಷ್ಠ ವಿಕೆಟ್ ಪಡೆದು ದಾಖಲೆಯೊಂದನ್ನು ಮುರಿದಿದ್ದರು. ಮಹ್ಮೂದ್ 3 ಪಂದ್ಯಗಳಲ್ಲಿ 9 ವಿಕೆಟ್ಗಳನ್ನು ಉರುಳಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಭಾರತಕ್ಕೆ ಸೀಮಿತ ಓವರ್ ಕ್ರಿಕೆಟ್ ಸರಣಿ ಆಡಲು ತೆರಳುವ ಮೊದಲು ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಇಂಗ್ಲೆಂಡ್ ವೇಗಿಗಳು ಯುಎಇಯಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ವೀಸಾಕ್ಕಾಗಿ ಮೊದಲೇ ಅರ್ಜಿ ಸಲ್ಲಿಸಿದ್ದರೂ ಪಾಕಿಸ್ತಾನಿ ಮೂಲದ ಆಟಗಾರನೆಂಬ ಕಾರಣಕ್ಕೆ 2019ರಲ್ಲಿ ಇಂಗ್ಲೆಂಡ್ ಲಯನ್ಸ್ ತಂಡದೊಂದಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳಲು ಮಹ್ಮೂದ್ಗೆ ವೀಸಾ ಪಡೆಯುವಲ್ಲಿ ಇಸಿಬಿ ವಿಫಲವಾಗಿತ್ತು.
ಪಾಕಿಸ್ತಾನ ಮೂಲದವರೆಂಬ ಕಾರಣಕ್ಕೆ ಕಳೆದ ವರ್ಷ ಶುಐಬ್ ಬಶೀರ್ ಕೂಡ ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಭಾರತ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಸರಣಿಯ ದಿನದಂದು ವೀಸಾ ಪಡೆಯಲು ಅವರು ಲಂಡನ್ಗೆ ಹಿಂತಿರುಗಬೇಕಾಯಿತು. ಆದರೆ ರೆಹಾನ್ ಅಹ್ಮದ್ ಒಂದೇ ಪ್ರವೇಶ ವೀಸಾ ಹೊಂದಿದ್ದ ಕಾರಣ ರಾಜ್ಕೋಟ್ನಲ್ಲಿ ವಶಕ್ಕೆ ಪಡೆಯಲಾಗಿತ್ತು.