ಹರಾಜಿಗೆ ಮುನ್ನ ಪಂಜಾಬ್ ಕಿಂಗ್ಸ್ ಪರವಾಗಿ ಆಡಲಾರೆ ಎಂದ ಕ್ರಿಕೆಟಿಗ!
PC : PTI
ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗೆ ಮುನ್ನ, ಭಾರತೀಯ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನನ್ನನ್ನು ಖರೀದಿಸಿದರೆ, ನನ್ನ ಶ್ರೇಷ್ಠ ನಿರ್ವಹಣೆಯನ್ನು ಕೊಡಲು ಸಾಧ್ಯವಾಗದು ಎಂದು ಅವರು ಹೇಳಿದ್ದಾರೆ.
ಆಫ್ ಸ್ಪಿನ್ನರ್ ಹಾಗೂ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಗೌತಮ್ 2020ರಲ್ಲಿ ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಪರವಾಗಿ ಆಡಿದ್ದಾರೆ. ಆ ತಂಡದ ಪರವಾಗಿ ಆಡಿರುವುದು ನನಗೆ ಸಮಾಧಾನ ತಂದಿಲ್ಲ ಎಂದು ಅವರು ಹೇಳಿದ್ದಾರೆ. ಮೆಗಾ ಹರಾಜಿಗೆ ಮುನ್ನ ಅವರನ್ನು ಲಕ್ನೋ ಸೂಪರ್ ಜಯಂಟ್ಸ್ (ಎಲ್ಎಸ್ಜಿ) ತಂಡವು ಬಿಡುಗಡೆಗೊಳಿಸಿದೆ.
‘‘ನಾನು ತಂಡವೊಂದರ ಪರವಾಗಿ ಆಡುವಾಗ, 100 ಶೇಕಡಕ್ಕಿಂತಲೂ ಹೆಚ್ಚಿನ ನಿರ್ವಹಣೆಯನ್ನು ಯಾವಾಗಲೂ ಕೊಡುತ್ತೇನೆ. ನಾನು ಯಾವುದನ್ನೂ ಉಳಿಸಿಕೊಳ್ಳುವುದಿಲ್ಲ. ಆದರೆ, ಪಂಜಾಬ್ ಕಿಂಗ್ಸ್ ನನ್ನನ್ನು ಖರೀದಿಸಿದರೆ, ಆ ತಂಡಕ್ಕೆ ನನ್ನ 100 ಶೇಕಡ ನಿರ್ವಹಣೆಯನ್ನು ನೀಡಲು ಸಾಧ್ಯವಾಗುವುದಿಲ್ಲ’’ ಎಂದು cricket.comಗೆ ನೀಡಿದ ಸಂದರ್ಶನವೊಂದರಲ್ಲಿ ಗೌತಮ್ ಹೇಳಿದ್ದಾರೆ.
‘‘ನಾನು ಪ್ರಾಮಾಣಿಕವಾಗಿದ್ದೇನೆ. ಪಂಜಾಬ್ ಕಿಂಗ್ಸ್ನಲ್ಲಿ ಆಡಲು ಇಚ್ಛಿಸದಿರಲು ಕಾರಣವೇನೆಂದರೆ, ಆ ತಂಡದೊಂದಿಗೆ ನನಗೆ ಯಾವತ್ತೂ ಉತ್ತಮ ಅನುಭವ ಆಗಿಲ್ಲ. ಇದು ಕೇವಲ ಕ್ರಿಕೆಟ್ ಬಗ್ಗೆ ಮಾತ್ರ ಅಲ್ಲ, ಇತರ ಹಲವು ಸಂಗತಿಗಳೂ ಇವೆ. ಕ್ರಿಕೆಟಿಗನಾಗಿ ನನ್ನನ್ನು ಆ ರೀತಿಯಾಗಿ ನಡೆಸಿಕೊಳ್ಳುವುದನ್ನು ನಾನು ಬಯಸುವುದಿಲ್ಲ’’ ಎಂದು ಅವರು ಹೇಳಿದರು.
ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ನಿರಂತರವಾಗಿ ಕಳಪೆ ನಿರ್ವಹಣೆ ನೀಡುತ್ತಾ ಬಂದಿದೆ. ಅದು 17 ವರ್ಷಗಳಲ್ಲಿ ಕೇವಲ ಎರಡು ಬಾರಿ ಪ್ಲೇಆಫ್ ತಲುಪಿದೆ. ಅದು 110.5 ಕೋಟಿ ರೂ. ಹಣವನ್ನು ಕೈಯಲ್ಲಿಟ್ಟುಕೊಂಡು ಈ ಬಾರಿಯ ಮೆಗಾ ಹರಾಜಿನಲ್ಲಿ ಭಾಗವಹಿಸುತ್ತಿದೆ. ಅದು ಈ ಬಾರಿ ಕೇವಲ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ. ಅವರೆಂದರೆ ಶಶಾಂಕ್ ಸಿಂಗ್ ಮತ್ತು ಪ್ರಭ್ಸಿಮ್ರಾನ್ ಸಿಂಗ್.
ಗೌತಮ್ 2018ರಲ್ಲಿ ರಾಜಸ್ಥಾನ ರಾಯಲ್ಸ್ನಲ್ಲಿ ಆಡುವುದರೊಂದಿಗೆ ಐಪಿಎಲ್ ಯಾನ ಆರಂಭಿಸಿದರು. ಆ ವರ್ಷ ಅವರು 126 ರನ್ ಮತ್ತು 11 ವಿಕೆಟ್ಗಳನ್ನು ಗಳಿಸಿದರು. ಬಳಿಕ, 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಬರೋಬ್ಬರಿ 9.25 ಕೋಟಿ ರೂ.ಗೆ ಖರೀದಿಸಿತು. ಅವರು ಕಳೆದ ಮೂರು ಋತುಗಳಲ್ಲಿ ಲಕ್ನೋ ಸೂಪರ್ ಜಯಂಟ್ಸ್ ಪರವಾಗಿ ಕೇವಲ 12 ಪಂದ್ಯಗಳಲ್ಲಿ ಆಡಿದ್ದಾರೆ.