ಪ್ಲೇ ಆಫ್ಗೆ ಅರ್ಹತೆ ಪಡೆಯಲು ಸಿಎಸ್ಕೆ, ಎಸ್ಆರ್ಎಚ್ ನ ಮುಂದಿನ ಸವಾಲುಗಳೇನು?

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದ ಈ ವರ್ಷದ ಐಪಿಎಲ್ ಟೂರ್ನಿಯಿಂದಲೇ ಹೊರ ಗುಳಿದ ನಂತರ ವಿಕೆಟ್ಕೀಪರ್-ಬ್ಯಾಟರ್ ಎಂ.ಎಸ್. ಧೋನಿ ಮತ್ತೊಮ್ಮೆ ನಾಯಕತ್ವದ ಹೊಣೆ ಹೊತ್ತಿದ್ದಾರೆ. ಧೋನಿ ನಾಯಕನಾಗಿದ್ದರೂ ಸಿಎಸ್ಕೆ ತಂಡದ ಕಳಪೆ ಪ್ರದರ್ಶನಕ್ಕೆ ಕಡಿವಾಣ ಬಿದ್ದಿಲ್ಲ. ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಪ್ರದರ್ಶನವೇ ಇದಕ್ಕೆ ಸಾಕ್ಷಿಯಾಗಿದೆ.
ಚೆನ್ನೈ ಮೂಲದ ಫ್ರಾಂಚೈಸಿಯು ಕೆಕೆಆರ್ ವಿರುದ್ಧ ಕೇವಲ 103 ರನ್ ಗಳಿಸಿ 8 ವಿಕೆಟ್ಗಳಿಂದ ಸೋಲುಂಡಿತ್ತು. ಮುಂಬೈ ತಂಡವು 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದಾಗ ಧೋನಿ ಮೌನವಾಗಿ ಎಲ್ಲವನ್ನೂ ನೋಡುತ್ತಿದ್ದರು.
8 ಪಂದ್ಯಗಳಲ್ಲಿ 6ರಲ್ಲಿ ಸೋತಿರುವ ಸಿಎಸ್ಕೆ ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಸನ್ರೈಸರ್ಸ್ ಹೈದರಾಬಾದ್(ಎಸ್ಆರ್ಎಚ್)ಕೂಡ ಇದೇ ರೀತಿಯ ಪರಿಸ್ಥಿತಿಯಲ್ಲಿದೆ. ಅದು ಈ ವರ್ಷ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. -1.217 ನೆಟ್ರನ್ರೇಟ್ ಹೊಂದಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ 286 ರನ್ ಗಳಿಸುವ ಮೂಲಕ ಹೈದರಾಬಾದ್ ಈ ವರ್ಷ ಭರ್ಜರಿ ಆರಂಭ ಪಡೆದಿತ್ತು. ಆದರೆ ಅದು ಇದೇ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿ ಸತತ ಸೋಲು ಕಾಣುತ್ತಿದೆ. ಇಶಾನ್ ಕಿಶನ್ ಕಳಪೆ ಫಾರ್ಮ್ ದೊಡ್ಡ ತಲೆನೋವಾಗಿದೆ. ಬೌಲರ್ಗಳು ತಮ್ಮ ಇರುವಿಕೆ ಸಾಬೀತುಪಡಿಸಲು ಪರದಾಡುತ್ತಿದ್ದಾರೆ. 2024ರ ಐಪಿಎಲ್ಗೆ ಹೋಲಿಸಿದರೆ ಈ ಬಾರಿ ಟ್ರಾವಿಸ್ ಹೆಡ್ ಬ್ಯಾಟ್ನಿಂದ ರನ್ ಹರಿದುಬರುತ್ತಿಲ್ಲ.
*ಸಿಎಸ್ಕೆ ಪ್ಲೇ ಆಫ್ಗೆ ಅರ್ಹತೆ ಪಡೆಯುವುದು ಹೇಗೆ?
ಸಿಎಸ್ಕೆ ತಂಡ ಪ್ಲೇ ಆಫ್ಗೆ ಅರ್ಹತೆ ಪಡೆಯುವ ತನ್ನ ಅವಕಾಶ ಹೆಚ್ಚಿಸಿಕೊಳ್ಳಲು ಇನ್ನುಳಿದ ಎಲ್ಲ 6 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಧೋನಿ ಪಡೆ ಸದ್ಯ 4 ಅಂಕ ಹೊಂದಿದ್ದು, ಅಗ್ರ ಐದು ತಂಡಗಳು ಈಗಾಗಲೇ 10 ಅಂಕ ಗಳಿಸಿಯಾಗಿದೆ. ಸಿಎಸ್ಕೆ ಈ ವರ್ಷದ ಐಪಿಎಲ್ನಲ್ಲಿ ಕಳಪೆ ರನ್ರೇಟ್ ಹೊಂದಿದೆ. ಇದು ತಂಡವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಅಗ್ರ-5ರಲ್ಲಿರುವ ತಂಡಗಳು ಒಂದು ವೇಳೆ ಸಮಸ್ಯೆಗೆ ಸಿಲುಕಿದರೆ ಸಿಎಸ್ಕೆ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದರೂ ಮುಂದಿನ ಸುತ್ತಿಗೇರುವ ಕನಸು ಕಾಣಬಹುದು. 2024ರ ಐಪಿಎಲ್ನಲ್ಲಿ ಆರ್ಸಿಬಿ 14 ಅಂಕ ಗಳಿಸಿದ್ದರೂ ಪ್ಲೇ ಆಫ್ ಗೆ ಲಗ್ಗೆ ಇಟ್ಟಿತ್ತು.
ಸಿಎಸ್ಕೆಯ ಮುಂಬರುವ ಪಂದ್ಯಗಳು:
ಎಪ್ರಿಲ್ 25: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ
ಎಪ್ರಿಲ್ 30: ಪಂಜಾಬ್ ಕಿಂಗ್ಸ್ ವಿರುದ್ಧ
ಮೇ 3: ಆರ್ಸಿಬಿ ವಿರುದ್ಧ
ಮೇ 7: ಕೆಕೆಆರ್ ವಿರುದ್ಧ
ಮೇ 12: ರಾಜಸ್ಥಾನ ರಾಯಲ್ಸ್ ವಿರುದ್ಧ
ಮೇ 18: ಗುಜರಾತ್ ಟೈಟಾನ್ಸ್ ವಿರುದ್ಧ
*ಅರ್ಹತೆ ಪಡೆಯಲು ಎಸ್ಆರ್ಎಚ್ ಏನು ಮಾಡಬೇಕಾಗಿದೆ?
ಪ್ಲೇ ಆಫ್ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಲು ಕಠಿಣ ಸ್ಪರ್ಧೆ ಇರುವುದನ್ನು ಪರಿಗಣಿಸಿದರೆ ಎಸ್ಆರ್ಎಚ್ ಕೂಡ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾಗಿದೆ.ಪ್ಯಾಟ್ ಕಮಿನ್ಸ್ ಬಳಗವು ಸದ್ಯ 4 ಅಂಕ ಗಳಿಸಿದ್ದು, ನೆಟ್ರನ್ರೇಟ್ 2ನೇ ಕಳಪೆ ಮಟ್ಟದಲ್ಲಿದೆ.
ಸಿಎಸ್ಕೆಗಿಂತ ಒಂದು ಪಂದ್ಯ ಕಡಿಮೆ ಆಡಿರುವ ಹೈದರಾಬಾದ್ ತಂಡಕ್ಕೆ ಪ್ಲೇ ಆಫ್ಗೆ ಲಗ್ಗೆ ಇಡುವ ಅವಕಾಶ ಈಗಲೂ ಇದೆ.ಸಿಎಸ್ಕೆ ಹಾಗೂ ಎಸ್ಆರ್ಎಚ್ ಎಪ್ರಿಲ್ 25ರಂದು ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವು ಉಭಯ ಫ್ರಾಂಚೈಸಿಗಳ ಪ್ಲೇ ಆಫ್ ಆಕಾಂಕ್ಷೆಗಳನ್ನು ನಿರ್ಧರಿಸಲು ನಿರ್ಣಾಯಕ ಪಾತ್ರವಹಿಸಲಿದೆ.
*ಎಸ್ಆರ್ಎಚ್ನ ಮುಂಬರುವ ಪಂದ್ಯಗಳು
ಎಪ್ರಿಲ್ 23: ಮುಂಬೈ ಇಂಡಿಯನ್ಸ್ ವಿರುದ್ಧ
ಎಪ್ರಿಲ್ 25: ಸಿಎಸ್ಕೆ ವಿರುದ್ಧ
ಮೇ 2: ಗುಜರಾತ್ ಟೈಟಾನ್ಸ್ ವಿರುದ್ಧ
ಮೇ 5: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ
ಮೇ 10: ಕೆಕೆಆರ್ ವಿರುದ್ಧ
ಮೇ 13: ಆರ್ಸಿಬಿ ವಿರುದ್ಧ
ಮೇ 18: ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ