ಚೆನ್ನೈ ಸೂಪರ್ ಕಿಂಗ್ಸ್ ಗರಿಷ್ಠ ಬ್ರ್ಯಾಂಡ್ ಮೌಲ್ಯ ಹೊಂದಿದ ಐಪಿಎಲ್ ತಂಡ
ನಂತರದ ಸ್ಥಾನ ಆರ್ಸಿಬಿ, ಮುಂಬೈ ಇಂಡಿಯನ್ಸ್ಗೆ
ಚೆನ್ನೈ ಸೂಪರ್ ಕಿಂಗ್ಸ್ ತಂಡ (PTI)
ಹೊಸದಿಲ್ಲಿ: ಭಾರತದಲ್ಲಿರುವ 10 ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯವನ್ನು ಅವಲೋಕಿಸಿ ಹೌಲಿಹನ್ ಲೋಕಿ ಸಂಸ್ಥೆ ವರದಿಯೊಂದನ್ನು ಬಿಡುಗಡೆಗೊಳಿಸಿದ್ದು ಈ ವರದಿಯಲ್ಲಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 212 ಮಿಲಿಯನ್ ಅಮೆರಿಕನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ಅಗ್ರ ಶ್ರೇಣಿಯಲ್ಲಿದೆ. ಎರಡನೇ ಸ್ಥಾನದಲ್ಲಿ 195 ಮಿಲಿಯನ್ ಅಮೆರಿಕನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ರಾಯಲ್ ಚ್ಯಾಲೆಂಜರ್ಸ್ (RCB) ತಂಡವಿದ್ದರೆ ಮೂರನೇ ಸ್ಥಾನದಲ್ಲಿ 190 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡವಿದೆ.
ಈ ವರದಿಯ ಪ್ರಕಾರ 181 ಮಿಲಿಯನ್ ಅಮೆರಿಕನ್ ಡಾಲರ್ ಬ್ರ್ಯಾಂಡ್ ಮೌಲ್ಯ ಹೊಂದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (133 ಮಿಲಿಯನ್ USD ), ಆರನೇ ಸ್ಥಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ (128 ಮಿಲಿಯನ್ USD), ಏಳನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ (120 ಮಿಲಿಯನ್ USD), ಎಂಟನೇ ಸ್ಥಾನದಲ್ಲಿ ಗುಜರಾತ್ ಟೈಟನ್ಸ್ (120 ಮಿಲಿಯನ್ USD), ಒಂಬತ್ತನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ (90 ಮಿಲಿಯನ್ USD) ಹಾಗೂ ಹತ್ತನೇ ಸ್ಥಾನದಲ್ಲಿ ಲಕ್ನೋ ಸೂಪರ್ ಜಯಂಟ್ಸ್ (83 ಮಿಲಿಯನ್ USD) ಇದೆ.
ಐಪಿಎಲ್ ತಂಡಗಳ ಆದಾಯ ಮತ್ತು ಹಣ ಸಂಪಾದನೆ ಸಾಮರ್ಥ್ಯದ ಆಧಾರದಲ್ಲಿ ಈ ರ್ಯಾಂಕಿಂಗ್ ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ಐಪಿಎಲ್ ಸೀಸನ್ಗಳ ಪೈಕಿ 10 ಸೀಸನ್ಗಳಲ್ಲಿ ಫೈನಲ್ ತಲುಪಿ ಐದು ಬಾರಿ ಗೆದ್ದಿದೆ. ಈ ತಂಡದ ಯಶಸ್ಸಿನಲ್ಲಿ ಧೋನಿ ಪಾತ್ರ ನಿರ್ಣಾಯಕವಾಗಿದೆ ಎಂದು ವರದಿ ಹೇಳಿದೆ.
ಒಟ್ಟಾರೆಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಮೌಲ್ಯ 15.4 ಬಿಲಿಯನ್ USD ಎಂದು ವರದಿ ಅಂದಾಜಿಸಿದೆ.