ಶುಕ್ರವಾರ ಐಪಿಎಲ್ ಟೂರ್ನಿಗೆ ಚಾಲನೆ, ಮೊದಲ ಪಂದ್ಯದಲ್ಲಿ ಚೆನ್ನೈ-ಬೆಂಗಳೂರು ಹಣಾಹಣಿ
ಚೆನ್ನೈ, ಮಾ.21: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಅಭಿಮಾನಿಗಳ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ಶುಕ್ರವಾರ ಎಂ.ಎ.ಚಿದಂಬರಂ ಸ್ಟೇಡಿಯಮ್ನಲ್ಲಿ ಮುಖಾಮುಖಿಯಾಗುವ ಮೂಲಕ 2024ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ವಿಧ್ಯುಕ್ತವಾಗಿ ಆರಂಭವಾಗಲಿದೆ.
ಟೂರ್ನಿಯಲ್ಲಿ ಒಟ್ಟು 10 ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೊ ಸೂಪರ್ ಜಯಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಭಾಗವಹಿಸುತ್ತಿವೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಉದ್ಘಾಟನಾ ಪಂದ್ಯದಲ್ಲಿ ಯಶಸ್ವಿ ನಾಯಕ ಎಂ.ಎಸ್. ಧೋನಿ ಬದಲಿಗೆ ಓಪನರ್ ಋತುರಾಜ್ ಗಾಯಕ್ವಾಡ್ ಆರ್ಸಿಬಿ ವಿರುದ್ಧ ಸಿಎಸ್ಕೆ ತಂಡವನ್ನು ಮುನ್ನಡೆಸಲಿದ್ದಾರೆ.
ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ಎರಡು ತಿಂಗಳು ವಿರಾಮ ಪಡೆದಿದ್ದ ವಿರಾಟ್ ಕೊಹ್ಲಿ ಆರ್ಸಿಬಿ ಪರ ಆಡುವ ಮೂಲಕ ಸಕ್ರಿಯ ಕ್ರಿಕೆಟಿಗೆ ವಾಪಸಾಗಲಿದ್ದಾರೆ.
ಕಳೆದ ವರ್ಷ ಚೆನ್ನೈ ತಂಡ ಐದನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ನಂತರ 10 ತಿಂಗಳ ಬಳಿಕ ಧೋನಿ ಕ್ರಿಕೆಟ್ ಮೈದಾನಕ್ಕೆ ಇಳಿಯುತ್ತಿದ್ದು ಎಲ್ಲರ ಚಿತ್ತ ಅವರತ್ತ ಹರಿದಿದೆ. ಮುಂಬರುವ ಋತುವಿನ ಅಂತ್ಯದಲ್ಲಿ ನಿವೃತ್ತಿಯಾಗುವ ಯೋಜನೆ ಇದೆ ಎಂದು ಧೋನಿ ಈ ಹಿಂದೆ ಘೋಷಿಸಿದ್ದರು.
ಬೆಂಗಳೂರು ನಾಯಕ ಎಫ್ ಡು ಪ್ಲೆಸಿಸ್ ಅವರು ಧೋನಿ ನಾಯಕತ್ವವನ್ನು ಶ್ಲಾಘಿಸಿದರು. ಅವರೊಬ್ಬ ಶ್ರೇಷ್ಠ ನಾಯಕ. ನಾನು ಚೆನ್ನೈ ತಂಡದಲ್ಲಿ ಹಲವು ವರ್ಷಗಳ ಕಾಲ ಅವರೊಂದಿಗೆ ಆಡುವ ಅದೃಷ್ಟ ಪಡೆದಿದ್ದೆ ಎಂದರು.
ಬೆಂಗಳೂರು ತಂಡ ಐಪಿಎಲ್ನಲ್ಲಿ 3 ಬಾರಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿದೆ. ಆದರೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಉಪಸ್ಥಿತಿಯಲ್ಲೂ ವಿನ್ನರ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಆರ್ಸಿಬಿ ಫ್ರಾಂಚೈಸಿ ಮಹಿಳಾ ಕ್ರಿಕೆಟ್ ತಂಡ ಮೊನ್ನೆಯಷ್ಟೆ 2024ರ ಡಬ್ಲ್ಯುಪಿಎಲ್ ಟ್ರೋಫಿ ಜಯಿಸಿ ಪ್ರಶಸ್ತಿಯ ಬರ ನೀಗಿಸಿತ್ತು.
ನೂತನ ಕೋಚ್ ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಆರ್ಸಿಬಿ ಈ ಬಾರಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ. 2008ರ ನಂತರ ಇದೇ ಮೊದಲ ಬಾರಿ ಚೆನ್ನೈ ತಂಡದ ಭದ್ರಕೋಟೆಯನ್ನು ಭೇದಿಸುವ ತವಕದಲ್ಲಿದೆ. ಚೆನ್ನೈ ತವರು ಮೈದಾನದಲ್ಲಿ ಆಡಿರುವ 100 ಪಂದ್ಯಗಳ ಪೈಕಿ 66ರಲ್ಲಿ ಜಯ ಸಾಧಿಸಿದೆ.
ಚೆನ್ನೈ ತಂಡದಲ್ಲಿ ಧೋನಿ, ಗಾಯಕ್ವಾಡ್, ಮೊಯಿನ್ ಅಲಿ,ದೀಪಕ್ ಚಹಾರ್, ಶಿವಂ ದುಬೆ, ರವೀಂದ್ರ ಜಡೇಜ, ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್ ಹಾಗೂ ಮಹೀಶ್ ತೀಕ್ಷಣ ಪ್ರಮುಖ ಆಟಗಾರರಾಗಿದ್ದಾರೆ.
ಆರ್ಸಿಬಿ ತಂಡದಲ್ಲಿ ನಾಯಕ ಪ್ಲೆಸಿಸ್, ವಿರಾಟ್ ಕೊಹ್ಲಿ, ಟಾಮ್ ಕರನ್, ಆಕಾಶ್ ದೀಪ್, ಕ್ಯಾಮರೂನ್ ಗ್ರೀನ್, ಅಲ್ಝಾರಿ ಜೋಸೆಫ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ವೆಲ್, ಮುಹಮ್ಮದ್ ಸಿರಾಜ್, ರಜತ್ ಪಾಟಿದಾರ್,ವಿ.ವೈಶಾಕ್, ಯಶ್ ದಯಾಳ್ ಹಾಗೂ ಕರ್ಣ್ ಶರ್ಮಾರಂತಹ ಪ್ರಮುಖ ಆಟಗಾರರಿದ್ದಾರೆ.
ಮಹತ್ವದ ಹೆಜ್ಜೆಯೊಂದರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನೂತನ ನಾಯಕರನ್ನಾಗಿ ನೇಮಿಸಿತ್ತು. ಪಾಂಡ್ಯ ಈ ಹಿಂದೆ 2015ರಿಂದ 2021ರ ತ ನಕ ಮುಂಬೈ ಪರ ಆಡಿದ್ದರು. ಮುಂಬೈ 5 ಬಾರಿ ಪ್ರಶಸ್ತಿ ಗೆಲ್ಲಲು ನಾಯಕತ್ವವಹಿಸಿದ್ದ ರೋಹಿತ್ ಶರ್ಮಾರಿಂದ ಪಾಂಡ್ಯ ನಾಯಕನ ಹುದ್ದೆವಹಿಸಿಕೊಂಡಿದ್ದಾರೆ.
ಶರ್ಮಾ ನಿರ್ಗಮನಕ್ಕೆ ಮುಂಬೈ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಮಾಜಿ ನಾಯಕನ ಬೆಂಬಲದೊಂದಿಗೆ ಮುಂಬೈ ತಂಡವನ್ನು ಯಶಸ್ಸಿನತ್ತ ಮುನ್ನಡೆಸುವೆ ಎಂದು ಪಾಂಡ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಭಮನ್ ಗಿಲ್ ಇದೇ ಮೊದಲ ಬಾರಿ ಗುಜರಾತ್ ಟೈಟಾನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ಗೆ ಉನ್ನತ ಮಟ್ಟದ ಕ್ರಿಕೆಟ್ ಆಡಲು ಅನುಮತಿ ನೀಡಲಾಗಿದ್ದು ಅವರು ಮೊಣಕಾಲು ಹಾಗೂ ಬೆನ್ನುನೋವಿನಿಂದ ಚೇತರಿಸಿಕೊಂಡಿದ್ದಾರೆ. ಕಾರು ಅಪಘಾತದಿಂದಾಗಿ 2022ರಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವಹಿಸಲಿದ್ದಾರೆ. ಪಂತ್ ನಾಯಕತ್ವದಲ್ಲಿ ಡೆಲ್ಲಿ 2020ರ ಐಪಿಎಲ್ನಲ್ಲಿ ಫೈನಲ್ಗೆ ತಲುಪಿತ್ತು.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಜೊತೆಗೂಡಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಲಿದ್ದಾರೆ.
ಆಸ್ಟ್ರೇಲಿಯದ ವೇಗಿದ್ವಯರಾದ ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದರು. ಸ್ಟಾರ್ಕ್ 6 ವರ್ಷಗಳ ನಂತರ ಐಪಿಎಲ್ಗೆ ವಾಪಸಾಗುತ್ತಿದ್ದು ದಾಖಲೆ ಮೊತ್ತಕ್ಕೆ ಕೆಕೆಆರ್ ಪಾಳಯ ಸೇರಿದ್ದಾರೆ.ಮತೊಂದೆಡೆ ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಭಾರೀ ಮೊತ್ತಕ್ಕೆ ಖರೀದಿಸಿದೆ.
ಮೊದಲ ಹಂತದ ಐಪಿಎಲ್ ಟೂರ್ನಿಯು ಮಾ.22ರಿಂದ ಎಪ್ರಿಲ್ 7ರ ತನಕ ನಡೆಯಲಿದ್ದು, ಒಟ್ಟು 21 ಪಂದ್ಯಗಳು ನಡೆಯಲಿವೆ. ಐಪಿಎಲ್ ಫೈನಲ್ ಪಂದ್ಯವು ಮೇ 26ಕ್ಕೆ ನಿಗದಿಯಾಗಿದೆ.
ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್(ನಾಯಕ),ಎಂ.ಎಸ್ ಧೋನಿ, ಮೊಯಿನ್ ಅಲಿ, ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಶಿವಂ ದುಬೆ, ರಾಜ್ಯವರ್ದನ್, ರವೀಂದ್ರ ಜಡೇಜ, ಅಜಯ್ ಮಂಡಲ್, ಮುಕೇಶ್ ಚೌಧರಿ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡ್ಯಾರಿಲ್ ಮಿಚೆಲ್, ಸಮೀರ್ ರಿಝ್ವಿ, ಮುಸ್ತಫಿಝರೆಹಮಾನ್, ಅವಿನಾಶ್ ರಾವ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಎಫ್ ಡು ಪ್ಲೆಸಿಸ್(ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಂಡಾಗೆ, ಮಯಾಂಕ್ ದಾಗರ್, ವಿಜಯಕುಮಾರ್ ವೈಶಾಕ್, ಆಕಾಶ್ ದೀಪ್, ಮುಹಮ್ಮದ್ ಸಿರಾಜ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗ್ಯುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.
ಪಂದ್ಯ ಆರಂಭದ ಸಮಯ: ರಾತ್ರಿ 8:00