ಭಾರತದ ಹಿರಿಯ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ನಿಧನ
ದತ್ತಾಜಿರಾವ್ ಗಾಯಕ್ವಾಡ್ (Photo:X/BCCI)
ಬರೋಡಾ: ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ ಎಂಬ ದಾಖಲೆ ಹೊಂದಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ಇಂದು ಬರೋಡಾದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ತಮ್ಮ ಒಂಬತ್ತು ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿದ್ದ ದತ್ತಾಜಿ ಗಾಯಕ್ವಾಡ್, ಈ ಪೈಕಿ ನಾಲ್ಕು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿದ್ದ ದತ್ತಾಜಿ ಗಾಯಕ್ವಾಡ್, 1952ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
2016ರಲ್ಲಿ ಮತ್ತೊಬ್ಬ ಅತ್ಯಂತ ಹಿರಿಯ ಭಾರತೀಯ ಕ್ರಿಕೆಟಿಗ ದೀಪಕ್ ಶೋಧನ್ ತಮ್ಮ 87ನೇ ವಯಸ್ಸಿನಲ್ಲಿ ಮೃತಪಟ್ಟ ನಂತರ, ಇನ್ನೂ ಜೀವಂತವಿರುವ ಅತ್ಯಂತ ಹಿರಿಯ ಭಾರತೀಯ ಕ್ರಿಕೆಟ್ ಆಟಗಾರ ಎಂಬ ಹಿರಿಮೆಗೆ ದತ್ತಾಜಿ ಗಾಯಕ್ವಾಡ್ ಭಾಜನರಾಗಿದ್ದರು.
ದತ್ತಾಜಿ ಗಾಯಕ್ವಾಡ್ರ ನಿಧನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ವ್ಯಕ್ತಪಡಿಸಿರುವ ಇರ್ಫಾನ್ ಪಠಾಣ್, ಅವರ ಅಗಲಿಕೆಯಿಂದ ಬರೋಡಾ ಕ್ರಿಕೆಟ್ಗೆ ತುಂಬಲಾರದ ನಷ್ಟವಾಗಿದೆ. ಅವರು ಬರೋಡಾ ಪ್ರಾಂತ್ಯದಲ್ಲಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದರು ಎಂದು ಕಂಬನಿ ಮಿಡಿದಿದ್ದಾರೆ.