ಸಿಡ್ನಿ ಥಂಡರ್ ನಾಯಕನಾಗಿ ಡೇವಿಡ್ ವಾರ್ನರ್ ನೇಮಕ
ಡೇವಿಡ್ ವಾರ್ನರ್ | PC : X \ @davidwarner31
ಮೆಲ್ಬರ್ನ್ : ದಕ್ಷಿಣ ಆಫ್ರಿಕಾದ ನ್ಯೂಲ್ಯಾಂಡ್ಸ್ನಲ್ಲಿ ಆರು ವರ್ಷಗಳ ಹಿಂದೆ ಚೆಂಡು ವಿರೂಪ ಹಗರಣಕ್ಕೆ ಸಂಬಂಧಿಸಿ ನಾಯಕತ್ವದ ನಿಷೇಧಕ್ಕೆ ಒಳಗಾಗಿದ್ದ ಡೇವಿಡ್ ವಾರ್ನರ್ ಇದೀಗ ಬಿಗ್ ಬ್ಯಾಶ್ ಲೀಗ್(ಬಿಬಿಎಲ್)ತಂಡ ಸಿಡ್ನಿ ಥಂಡರ್ನ ನಾಯಕನಾಗಿ ನೇಮಕಗೊಂಡಿದ್ದಾರೆ.
ಸ್ಯಾಂಡ್ ಪೇಪರ್ ನಿಂದ ಚೆಂಡು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿ ವಾರ್ನರ್ ನಾಯಕತ್ವದ ಸ್ಥಾನಕ್ಕೆ ವಿಧಿಸಲಾಗಿದ್ದ ಆಜೀವ ನಿಷೇಧವನ್ನು ಕ್ರಿಕೆಟ್ ಆಸ್ಟ್ರೇಲಿಯ(ಸಿಎ) ಕಳೆದ ತಿಂಗಳು ಹಿಂಪಡೆದ ನಂತರ ಈ ಬೆಳವಣಿಗೆ ನಡೆದಿದೆ.
ಈ ಋತುವಿನಲ್ಲಿ ಮತ್ತೊಮ್ಮೆ ಥಂಡರ್ ನಾಯಕತ್ವವಹಿಸಿದ್ದು, ನನ್ನ ಪಾಲಿಗೆ ಮಹತ್ವದ್ದಾಗಿದೆ. ನಾನು ಆರಂಭದಿಂದಲೂ ತಂಡದ ಭಾಗವಾಗಿರುವೆ. ಇದೀಗ ನಾಯಕತ್ವದೊಂದಿಗೆ ವಾಪಸಾಗಿದ್ದು, ಖುಷಿ ತಂದಿದೆ ಎಂದು ತಂಡದ ಸ್ಥಾಪಕ ನಾಯಕನಾಗಿರುವ ವಾರ್ನರ್ ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಪ್ರಮುಖ ಆರಂಭಿಕ ಬ್ಯಾಟರ್ ವಾರ್ನರ್ ಅವರು ಈ ವರ್ಷಾರಂಭದಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು.
2018ರಲ್ಲಿ ಕೇಪ್ಟೌನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ ವೇಳೆ ಚೆಂಡನ್ನು ವಿರೂಪಗೊಳಿಸಿದ ಆರೋಪಕ್ಕೆ ಒಳಗಾಗಿದ್ದರು.
ವಾರ್ನರ್ ಜೊತೆಗೆ ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವ್ ಸ್ಮಿತ್ರನ್ನು ವರ್ಷ ಕಾಲ ನಿಷೇಧಿಸಲಾಗಿತ್ತು. ಆರಂಭಿಕ ಬ್ಯಾಟರ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ರನ್ನು 9 ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು.