ವಿಶ್ವಕಪ್| ಡಿಕಾಕ್, ಡುಸ್ಸೆನ್ ಶತಕದ ಆಟ: 358 ರನ್ ಗುರಿ ಪಡೆದ ನ್ಯೂಝಿಲ್ಯಾಂಡ್
ಕ್ವಿಂಟನ್ ಡಿಕಾಕ್ (Photo: cricketworldcup.com)
ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಗೆಲುವಿಗೆ ದಕ್ಷಿಣ ಆಫ್ರಿಕಾ 358 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಕ್ವಿಂಟನ್ ಡಿಕಾಕ್ ಹಾಗೂ ರಾಸ್ಸಿ ವಾನ್ ಡರ್ ಡುಸ್ಸೆನ್ ದ್ವಿಶತಕದ ಜೊತೆಯಾಟದಲ್ಲಿ ಅವಳಿ ಶತಕ ಸಿಡಿಸಿದ ಈರ್ವರು ಬ್ಯಾಟರ್ ಗಳು ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಏಕದಿನ ವಿಶ್ವಕಪ್ 2023 ನಲ್ಲಿ ಕ್ವಿಂಟನ್ ಡಿಕಾಕ್ ನಾಲ್ಕನೇ ಶತಕ ಬಾರಿಸಿದರೆ, ವಾನ್ ಡರ್ ಡುಸ್ಸನ್ ಎರಡನೇ ಶತಕ ಬಾರಿಸಿ ಸಂಭ್ರಮಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಬೌಲಿಂಗ್ ಆಯ್ದುಕೊಂಡಿತು. ಇತ್ತ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಹರಿಣ ಬ್ಯಾಟರ್ಸ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಟೂರ್ನಿಯುದ್ದಕ್ಕೂ ಅದ್ಬುತ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ತೆಂಬಾ ಬವುಮ ಬ್ಯಾಟಿಂಗ್ ವೈಫಲ್ಯ ನಿರಂತರವಾಗಿ ಕಾಡುತ್ತಿದೆ. ಇಂದು ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದಿದ್ದ ತೆಂಬಾ ಬವುಮ 24 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರು. ಬವುಮ ವಿಕೆಟ್ ಪತನದ ಬಳಿಕ ಜೊತೆಯಾದ ರಾಸ್ಸಿ ವಾನ್ ಡರ್ ಡುಸ್ಸನ್ ಹಾಗೂ ಕ್ವಿಂಟನ್ ಡಿಕಾಕ್ ಜೋಡಿ ಕಿವೀಸ್ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ಪ್ರತಿಯೊಂದು ಬಾಲ್ ದಂಡಿಸಿದ ಈ ಜೋಡಿ ಅವಳಿ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು. ಹರಿಣಗಳ ಬ್ಯಾಟಿಂಗ್ ಬೆನ್ನೆಲುಬು ಕ್ವಿಂಟನ್ ಡಿಕಾಕ್ 116 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್ ಸಹಿತ 114 ರನ್ ಬಾರಿಸಿ ಟೂರ್ನಿಯಲ್ಲಿ ನಾಲ್ಕನೇ ಶತಕ ಸಿಡಿಸಿ ಸಂಭ್ರಮಿಸಿದರೆ, ರಾಸ್ಸಿ ವಾನ್ ಡರ್ ಡುಸ್ಸನ್ 118 ಎಸೆತಗಳಲ್ಲಿ 9 ಬೌಂಡರಿ 5 ಸಿಕ್ಸರ್ ಸಹಿತ 133 ರನ್ ಸ್ಟೋಟಕ ಶತಕ ಬಾರಿಸಿ ಟಿಮ್ ಸೌಥಿ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಬಳಿಕ ತಂಡದ ಗುರಿ ಮುನ್ನೂರು ಐವತ್ತು ದಾಟಿಸುವಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಡೇವಿಡ್ ಮಿಲ್ಲರ್ 53 ರನ್ ಬಾರಿಸಿದರೆ ಅವರಿಗೆ ಸಾಥ್ ನೀಡಿದ್ದ ಹೆನ್ರಿ ಕ್ಲಾಸನ್15 ರನ್ ಮಾರ್ಕ್ರಮ್ 6 ರನ್ ಗಳಿಸಿದರು.
ನ್ಯೂಝಿಲ್ಯಾಂಡ್ ಪರ ಟಿಮ್ ಸೌಥಿ 2 ವಿಕೆಟ್ ಪಡೆದರೆ ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಪಡೆದರು.