ಡ್ರೆಸ್ಸಿಂಗ್ ಕೋಣೆಯಲ್ಲಿನ ಚರ್ಚೆಗಳು ಅಲ್ಲಿಗೇ ಮುಗಿಯಬೇಕು: ಗೌತಮ್ ಗಂಭೀರ್ ತಾಕೀತು
ಆಟಗಾರರೊಂದಿಗೆ ಪ್ರಾಮಾಣಿಕ ಮಾತುಕತೆ ನಡೆಸಲಾಗಿದೆ ಎಂದ ಭಾರತ ತಂಡದ ಮುಖ್ಯ ಕೋಚ್
ಗೌತಮ್ ಗಂಭೀರ್ (Photo: PTI)
ಸಿಡ್ನಿ: ಡ್ರೆಸ್ಸಿಂಗ್ ಕೋಣೆಯಲ್ಲಿನ ಚರ್ಚೆಗಳು ಸಾರ್ವಜನಿಕಗೊಳ್ಳಬಾರದು ಎಂದು ಆಟಗಾರರಿಗೆ ತಾಕೀತು ಮಾಡಲಾಗಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದು, ಉತ್ತಮ ಪ್ರದರ್ಶನ ಮಾತ್ರ ಅವರನ್ನು ಸ್ಥಿರವಾಗಿಡಬಲ್ಲದು ಎಂದು ಆಟಗಾರರೊಂದಿಗೆ ನಡೆಸಲಾಗಿರುವ ಪ್ರಾಮಾಣಿಕ ಮಾತುಕತೆಯಲ್ಲಿ ಕಿವಿಮಾತು ಹೇಳಲಾಗಿದೆ ಎಂದೂ ಹೇಳಿದರು.
ಆಸ್ಟ್ರೇಲಿಯ ತಂಡದ ವಿರುದ್ಧ ಶುಕ್ರವಾರದಿಂದ ಪ್ರಾರಂಭಗೊಳ್ಳಲಿರುವ ಐದನೆ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಫಾರ್ಮ್ ಕಳೆದುಕೊಂಡಿರುವ ನಾಯಕ ರೋಹಿತ್ ಶರ್ಮ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಡ್ರೆಸ್ಸಿಂಗ್ ಕೋಣೆಯಲ್ಲಿ ಭಾರಿ ತಿಕ್ಕಾಟ ನಡೆಯುತ್ತಿದೆ ಎಂಬ ವದಂತಿಗಳನ್ನೂ ಅಲ್ಲಗಳೆದ ಅವರು, ಅವೆಲ್ಲ ಕೇವಲ ವರದಿಗಳಾಗಿದ್ದು, ಅವುಗಳಲ್ಲಿ ಯಾವುದೇ ವಾಸ್ತವಾಂಶವಿಲ್ಲ ಎಂದು ಸ್ಟಷ್ಟೀಕರಣ ನೀಡಿದರು.
“ಆಟಗಾರರು ಹಾಗೂ ಕೋಚ್ ನಡುವಿನ ಚರ್ಚೆಗಳು ಡ್ರೆಸ್ಸಿಂಗ್ ಕೋಣೆಯಲ್ಲೇ ಉಳಿಯಬೇಕು. ಈ ಬಗ್ಗೆ ಕಠಿಣವಾಗಿ ಎಚ್ಚರಿಸಲಾಗಿದೆ. ಅವೆಲ್ಲ ಕೇವಲ ವರದಿಗಳಾಗಿದ್ದು, ಯಾವುದೇ ವಾಸ್ತವಾಂಶವಿಲ್ಲ” ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಹೇಳಿದರು. “ಡ್ರೆಸ್ಸಿಂಗ್ ಕೋಣೆಯಲ್ಲಿ ಪ್ರಾಮಾಣಿಕ ವ್ಯಕ್ತಿಗಳು ಇರುವವರೆಗೂ ಭಾರತೀಯ ಕ್ರಿಕೆಟ್ ಸುರಕ್ಷಿತ ಕೈಗಳಲ್ಲಿ ಇರುತ್ತದೆ. ನಿಮ್ಮ ಪ್ರದರ್ಶನ ಮಾತ್ರ ನಿಮ್ಮನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಉಳಿಸುತ್ತದೆ” ಎಂದೂ ಅವರು ಹೇಳಿದರು. “ಈ ಕುರಿತು ಪ್ರಾಮಾಣಿಕ ಮಾತುಕತೆ ನಡೆಸಲಾಗಿದ್ದು, ಪ್ರಾಮಾಣಿಕತೆ ಬಹು ಮುಖ್ಯವಾಗಿದೆ” ಎಂದು ಅವರು ಪ್ರತಿಪಾದಿಸಿದರು.
ರೋಹಿತ್ ಶರ್ಮ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆಯೆ ಎಂಬ ಕುರಿತು ಪ್ರತಿಕ್ರಿಯಿಸಿಲು ಗೌತಮ್ ಗಂಭೀರ್ ನಿರಾಕರಿಸಿದರು. ಒಂದು ವೇಳೆ ಅಂತಿಮ ಹನ್ನೊಂದರ ಪಟ್ಟಿಯಲ್ಲಿ ಇರುವುದಾದರೆ, ತಂಡದ ನಾಯಕನೇಕೆ ರೂಢಿಯಂತೆ ಪಂದ್ಯಪೂರ್ವ ಪತ್ರಿಕಾಗೋಷ್ಠಿಗೆ ಹಾಜರಾಗಿಲ್ಲ ಎಂಬ ಪ್ರಶ್ನೆಗೆ, “ರೋಹಿತ್ ರೊಂದಿಗೆ ಎಲ್ಲವೂ ಚೆನ್ನಾಗಿದೆ. ಮುಖ್ಯ ಕೋಚ್ ಇಲ್ಲಿದ್ದು, ಅದು ಸಾಕಾಗಿದೆ. ನಾವು ಪಿಚ್ ಗಮನಿಸಿದ ನಂತರ, ಅಂತಿಮ ಹನ್ನೊಂದರ ತಂಡವನ್ನು ನಿರ್ಧರಿಸಲಿದ್ದೇವೆ” ಎಂದು ಅವರು ಸ್ಪಷ್ಟನೆ ನೀಡಿದರು.