ಜಾರ್ಖಂಡ್‌ನ ಬಂಗಾರ ದೀಪಿಕಾ ಕುಮಾರಿ!
ಒಲಿಂಪಿಕ್ಸ್‌ನಲ್ಲಿ ದೀಪಿಕಾ ಕುಮಾರಿ ಮಹಿಳೆಯರ ಆರ್ಚರಿಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಿಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಈ ಪಂದ್ಯ ಶನಿವಾರ ನಡೆಯಲಿದೆ.
ಈ ಒಲಿಂಪಿಕ್ಸ್‌ನಲ್ಲಿ ಆರ್ಚರಿಯಲ್ಲಿ ಮಹಿಳಾ ತಂಡದ ಪ್ರದರ್ಶನದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾರವರ ಮೈಬಣ್ಣ, ರಾಜ್ಯ, ಸಮುದಾಯವನ್ನೆಲ್ಲಾ ಗುರಿಯಾಗಿಸಿಕೊಂಡು ಹೀಯಾಳಿಸಲಾಗಿತ್ತು. ಮಾಧ್ಯಮಗಳ ಒತ್ತಡ, ಸಾರ್ವಜನಿಕರ ಟೀಕೆ ಎಲ್ಲವನ್ನೂ ಎದುರಿಸಿ, ಈಗ ವೈಯಕ್ತಿಕ ವಿಭಾಗದಲ್ಲಿ ಪ್ರಿಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಒಲಿಂಪಿಕ್ಸ್ ಪದಕ ಬಿಟ್ಟು ಬೇರೆಲ್ಲಾ ಪದಕಗಳನ್ನು ಗೆದ್ದಿರುವ ದೀಪಿಕಾರ ಸಾಧನೆಯನ್ನು ಪದಕಗಳಿಂದ, ಒಲಿಂಪಿಕ್ಸ್ ಪ್ರದರ್ಶನದಿಂದ ಅಳೆಯಲಾಗದು.
ಭಾರತದ ಎರಡನೇ ಅತೀ ಬಡ ರಾಜ್ಯ ಜಾರ್ಖಂಡ್‌ನ ರಾತು ಎಂಬ ಹಳ್ಳಿಯೊಂದರಲ್ಲಿ, ತುತ್ತು ಅನ್ನಕ್ಕೂ ಕಷ್ಟ ಪಡುವ ಅತ್ಯಂತ ಬಡ ಕುಟುಂಬದಲ್ಲಿ ಬಾಡಿಗೆ ರಿಕ್ಷಾ ಚಲಾಯಿಸುತ್ತಿದ್ದ ತಂದೆ, ಅಸ್ಪತ್ರೆಗಳಲ್ಲಿ ಸಹಾಯಕಿಯಾಗಿದ್ದ ತಾಯಿಯ, ಹಿಂದುಳಿದ ಕುಂಬಾರ ಸಮುದಾಯದ ಕುಟುಂಬದ ಹಿರಿಮಗಳು ದೀಪಿಕಾ ಕುಮಾರಿ. ಹೆಣ್ಣು ಮಕ್ಕಳು ಇರುವುದೇ ಮದುವೆ ಮಾಡಿ ಕಳಿಸಲು ಎಂಬ ಕಲ್ಪನೆ ಇರುವ ಸಾಂಪ್ರದಾಯಿಕ ಹಳ್ಳಿಯಾದ ರಾತುವಿನಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರಗಡೆ ಹೋಗಿ ಆಡುವುದೂ ತಪ್ಪು ಎಂದು ಭಾವಿಸುವ ಜನರು ಈಗಲೂ ಇದ್ದಾರೆ.
ಕೇವಲ ಉಚಿತ ಊಟ ಹಾಗೂ ವಸತಿಯ ಆಸೆಗಾಗಿ, ಬಡತನ ಮತ್ತು ಕೌಟುಂಬಿಕ ಜಗಳಗಳಿಂದ ಮುಕ್ತಿಗಾಗಿ ರಾತುವಿನಿಂದ 130 ಕಿ.ಮೀ. ದೂರದಲ್ಲಿದ್ದ ಸೆರಾಯಿಕೆಲ್ಲದ ಸರಕಾರಿ ಆರ್ಚರಿ ಅಕಾಡಮಿಗೆ ಸೇರಿದ್ದ ದೀಪಿಕಾ ಕುಮಾರಿ ಮುಂದೆ ಭಾರತದ ಆರ್ಚರಿ ಇತಿಹಾಸದ ದಂತಕಥೆಯೇ ಆಗಿಬಿಟ್ಟರು.
ಭಾರತದ ಅತ್ಯಂತ ಕಿರಿಯ ಬಂಗಾರದ ಪದಕ ವಿಜೇತೆ, ಹದಿನೆಂಟನೇ ವರ್ಷದ ವಯಸ್ಸಿಗೇ ಆರ್ಚರಿಯಲ್ಲಿ ವಿಶ್ವದ ನಂ 1, ವಿಶ್ವ ಶ್ರೇಣಿಯಲ್ಲಿ ಅತೀ ಹೆಚ್ಚು ಚಿನ್ನದ ಪದಕ ಗೆದ್ದಿರುವ ಭಾರತದ ಮೊದಲ ಕ್ರೀಡಾಪಟು ಇತ್ಯಾದಿಗಳ ಜೊತೆಗೆ ಇನ್ನೂ ಹೆಮ್ಮೆಯ ವಿಷಯ ಅಂದರೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆರ್ಚರಿ ಆಡಲು ಆರಂಭಿಸಿದ ಮೂರೇ ವರ್ಷಗಳ ಒಳಗೆ ವಿಶ್ವದ ನಂ. 1 ಸ್ಥಾನ ಗಿಟ್ಟಿಸಿದ ಮೊದಲ ಕ್ರೀಡಾಪಟು ದೀಪಿಕಾ ಕುಮಾರಿ! ಈಕೆ ಕೇವಲ ಭಾರತ ದೇಶದಲ್ಲಿ ಮಾತ್ರ ಅಲ್ಲ ವಿಶ್ವ ಮಹಿಳಾ ಆರ್ಚರಿಯ ಧ್ರುವತಾರೆ!
ದೀಪಿಕಾ ಕುಮಾರಿಗೆ ಇದು ನಾಲ್ಕನೇ ಒಲಿಂಪಿಕ್ಸ್. ಈ ಒಲಿಂ ಪಿಕ್ಸ್‌ನ ಕೇವಲ ಒಂದೂವರೆ ವರ್ಷಗಳ ಹಿಂದೆ ದೀಪಿಕಾ ಕುಮಾರಿ ತನ್ನ ಮಗಳು ವೇದಿಕಾಗೆ ಜನ್ಮ ನೀಡಿದ್ದಾರೆ.
ಹನ್ನೊಂದು ವಿಶ್ವಕಪ್ ಚಿನ್ನ, ಒಂದು ಏಶ್ಯ ಕಪ್ ಚಿನ್ನ, ಎರಡು ಕಾಮನ್‌ವೆಲ್ತ್ ಚಿನ್ನ ಸೇರಿದಂತೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಳೆದ 14 ವರ್ಷಗಳಲ್ಲಿ 49 ಪದಕಗಳನ್ನು ಭಾರತಕ್ಕಾಗಿ ಗೆದ್ದಿದ್ದಾರೆ.
ಕೋಚ್, ನ್ಯೂಟ್ರೀಷನಿಷ್ಟ್ ಮತ್ತು ಮೆಂಟಲ್ ಕೋಚ್ ಬದಲಿಗೆ ಸರಕಾರಿ ಅಧಿಕಾರಿಗಳನ್ನು ಫಸ್ಟ್ ಕ್ಲಾಸಿನಲ್ಲಿ ಕಳುಹಿಸಿ, ಕ್ರೀಡಾಪಟುಗಳನ್ನು ಎಕಾನಮಿ ದರ್ಜೆಯ ಸೀಟಿನಲ್ಲಿ ಪ್ರಯಾಣಿಸುವಂತೆ ಮಾಡುವ ದೇಶ ನಮ್ಮದು! ಈ ಸವಾಲುಗಳ ನಡುವೆಯೂ ದೀಪಿಕಾ ಕುಮಾರಿ ಪದಕ ಗೆಲ್ಲಲಿ, ಇನ್ನಷ್ಟು ಗ್ರಾಮೀಣ ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿ!