ಒಲಿಂಪಿಕ್ಸ್ ಮುನ್ನ ಟಾಪ್ಸ್ ಕೋರ್ ಗ್ರೂಪ್ಗೆ ಸೇರ್ಪಡೆಗೊಂಡ ದೀಪಿಕಾ ಕುಮಾರಿ
ದೀಪಿಕಾ ಕುಮಾರಿ | PC : X
ಹೊಸದಿಲ್ಲಿ: ಮಾಜಿ ವಿಶ್ವ ನಂಬರ್ ವನ್ ಬಿಲ್ಲುಗಾರ್ತಿ ದೀಪಿಕಾ ಕುಮಾರಿಯನ್ನು, ಪ್ಯಾರಿಸ್ ಒಲಿಂಪಿಕ್ಸ್ಗೆ ಮುನ್ನ ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಾಪ್ಸ್) ಪ್ರಧಾನ ಗುಂಪಿಗೆ ಮರುಸೇರ್ಪಡೆಗೊಳಿಸಲಾಗಿದೆ ಎಂದು ಕ್ರೀಡಾ ಸಚಿವಾಲಯ ಸೋಮವಾರ ಘೋಷಿಸಿದೆ.
ಶಾಂಘೈಯಲ್ಲಿ ಈಗಷ್ಟೇ ಮುಕ್ತಾಯಗೊಂಡಿರುವ ವಿಶ್ವಕಪ್ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.
2022ರ ಡಿಸೆಂಬರ್ನಲ್ಲಿ ಅವರು ತಾಯಿಯಾದ ಬಳಿಕ, ಕಳೆದ ವರ್ಷ ಇಡೀ ಋತುವಿನಲ್ಲಿ ಅವರು ಸ್ಪರ್ಧೆಯಿಂದ ಹೊರಗಿದ್ದರು. ಇತ್ತೀಚೆಗೆ ಅವರು ಸ್ಪರ್ಧೆಗೆ ಮರಳಿದ್ದು, ದೇಶಿ ಮತ್ತು ಅಂತರರಾಷ್ಟ್ರೀಯ ಎರಡೂ ಮಟ್ಟಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಮೂರು ಬಾರಿಯ ಒಲಿಂಪಿಕ್ ಚಾಂಪಿಯನ್ ಆಗಿರುವ 29 ವರ್ಷದ ರಿಕರ್ವ್ ಬಿಲ್ಲುಗಾರ್ತಿ, ಈ ವರ್ಷದ ಆದಿ ಭಾಗದಲ್ಲಿ ನಡೆದ ಏಶ್ಯ ಕಪ್ನಲ್ಲೂ ಪದಕ ಗೆದ್ದಿದ್ದಾರೆ.
ಈವರೆಗೆ, ಪುರುಷರ ವೈಯಕ್ತಿಕ ವಿಭಾಗದಲ್ಲಿ ಧೀರಜ್ ಬೊಮ್ಮದೇವರ ಮಾತ್ರ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದಾರೆ. ಕಳೆದ ವರ್ಷ ಬ್ಯಾಂಕಾಂಕ್ನಲ್ಲಿ ನಡೆದ ಏಶ್ಯನ್ ಅರ್ಹತಾ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗಳಿಸಿದ ಹಿನ್ನೆಲೆಯಲ್ಲಿ ಅವರಿಗೆ ಈ ಅರ್ಹತೆ ಒಲಿದಿದೆ.
ಇನ್ನೋರ್ವ ಬಿಲ್ಲುಗಾರ ಮೃಣಾಲ್ ಚೌಹಾಣ್ರನ್ನು ಟಾಪ್ಸ್ ಡೆವೆಲಪ್ಮೆಂಟ್ ಗ್ರೂಪ್ಗೆ ಸೇರಿಸಲಾಗಿದೆ. ಅದೇ ವೇಳೆ, ಪ್ರವೀಣ್ ಜಾಧವ್ರನ್ನು ಟಾಪ್ಸ್ ಡೆವೆಲಪ್ಮೆಂಟ್ ಗ್ರೂಪ್ನಿಂದ ಕೋರ್ ಗ್ರೂಪ್ಗೆ ವರ್ಗಾಯಿಸಲಾಗಿದೆ.