ಕ್ವಾರ್ಟರ್ ಫೈನಲ್ನಲ್ಲಿ ಎಡವಿದ ದೀಪಿಕಾ ಕುಮಾರಿ | ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಆರ್ಚರಿ ಅಭಿಯಾನ ಅಂತ್ಯ
ದೀಪಿಕಾ ಕುಮಾರಿ | PTI
ಪ್ಯಾರಿಸ್: ಭಾರತದ ಹಿರಿಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದರು. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಭಾರತದ ಆರ್ಚರಿ ತಂಡದ ಅಭಿಯಾನ ಅಂತ್ಯವಾಗಿದೆ.
ದೀಪಿಕಾ ಶನಿವಾರ ನಡೆದ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ನಾಮ್ ಸುಹಿಯೊನ್ ವಿರುದ್ಧ 4-6 ಅಂತರದಿಂದ ಸೋಲನುಭವಿಸಿದರು.
19ರ ಹರೆಯದ ದಕ್ಷಿಣ ಕೊರಿಯಾದ ಆರ್ಚರ್ ಸುಹಿಯೊನ್ ವಯಸ್ಸಿನಲ್ಲಿ ತನಗಿಂತ 11 ವರ್ಷ ದೊಡ್ಡವರಾಗಿರುವ ದೀಪಿಕಾರನ್ನು 28-26, 25-28, 29-28, 27-29, 27-29 ಅಂತರದಿಂದ ಸೋಲಿಸಿ ಸೆಮಿ ಫೈನಲ್ಗೆ ಪ್ರವೇಶಿಸಿದರು.
ಇದಕ್ಕೂ ಮೊದಲು ದೀಪಿಕಾ ಎಲಿಮಿನೇಶನ್ ಸುತ್ತಿನಲ್ಲಿ ಜರ್ಮನಿಯ ಮಿಚೆಲ್ ಕ್ರಾಪ್ಪೆನ್ರನ್ನು 6-4 ಅಂತರದಿಂದ ಮಣಿಸುವುದರೊಂದಿಗೆ ಕ್ವಾರ್ಟರ್ ಫೈನಲ್ಗೆ ತಲುಪಿದ್ದರು. ಆದರೆ ಕೊರಿಯಾದ ಯುವ ಬಿಲ್ಲುಗಾರ್ತಿಯ ಎದುರು ತನ್ನ ಹಿಂದಿನ ಯಶಸ್ಸನ್ನು ಪುನರಾವರ್ತಿಸುವಲ್ಲಿ ದೀಪಿಕಾ ವಿಫಲರಾದರು.
ಎಪ್ರಿಲ್ನಲ್ಲಿ ಶಾಂಘೈನಲ್ಲಿ ನಡೆದಿದ್ದ ಆರ್ಚರಿ ವಿಶ್ವಕಪ್ನ ಸೆಮಿ ಫೈನಲ್ ಪಂದ್ಯದಲ್ಲಿ ದೀಪಿಕಾ ಅವರು ನಾಮ್ರನ್ನು ನೇರ ಸೆಟ್ಗಳಿಂದ ಮಣಿಸಿದ್ದರು. ಒಲಿಂಪಿಕ್ಸ್ ನ ಇಂತಹ ನಿರ್ಣಾಯಕ ಸಂದರ್ಭದಲ್ಲಿ ದೀಪಿಕಾ ಅದೇ ರೀತಿಯ ಪ್ರದರ್ಶನ ನೀಡುವಲ್ಲಿ ಎಡವಿದರು.
ಟೀಮ್ ಸ್ಪರ್ಧೆಯಲ್ಲಿ ನಿರಾಶಾದಾಯಕ ಪ್ರದರ್ಶನಕ್ಕೆ ಟೀಕೆಯನ್ನು ಎದುರಿಸಿದ್ದ ದೀಪಿಕಾ ಪಂದ್ಯದುದ್ದಕ್ಕೂ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ಪರದಾಟ ನಡೆಸಿದರು. 2ನೇ ಹಾಗೂ 4ನೇ ಸೆಟ್ಗಳಲ್ಲಿ ಕ್ರಮವಾಗಿ ಆರು ಹಾಗೂ ಏಳು ಅಂಕ ಗಳಿಸಿದರು. ಇದು ಹಿನ್ನಡೆಗೆ ಕಾರಣವಾಯಿತು.
ಭಾರತದ ಇನ್ನೋರ್ವ ಬಿಲ್ಲುಗಾರ್ತಿ ಭಜನ್ ಕೌರ್ ಮಹಿಳೆಯರ ವೈಯಕ್ತಿಕ ವಿಭಾಗದ ಎಲಿಮಿನೇಶನ್ ಸುತ್ತಿನಲ್ಲಿ ಇಂಡೋನೇಶ್ಯದ ದಿಯಾನಂದ ಚೊರುನಿಸಾ ಎದುರು 5-6 ಅಂತರದಿಂದ ಸೋತಿದ್ದಾರೆ.