ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ಗೆ ಸೆಮಿ ಫೈನಲ್ನಲ್ಲಿ ಸೋಲು : ಕಂಚಿಗಾಗಿ ಹೋರಾಟ

ಅಮನ್ ಸೆಹ್ರಾವತ್ | PC : PTI
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ 57 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಸೆಮಿ ಫೈನಲ್ನಲ್ಲಿ ಸೋತಿದ್ದಾರೆ. ಇನ್ನೂ ಸ್ಪರ್ಧೆಯಲ್ಲಿ ಉಳಿದುಕೊಂಡಿರುವ ಅಮನ್ ಶುಕ್ರವಾರ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
21ರ ಹರೆಯದ ಅಮನ್ ಅವರು ಗುರುವಾರ ನಡೆದ ಸೆಮಿ ಫೈನಲ್ನಲ್ಲಿ ಜಪಾನ್ನ ಅಗ್ರ ಶ್ರೇಯಾಂಕದ ರಿ ಹಿಗುಚಿ ಅವರ ವಿರುದ್ಧ 0-10 ಅಂತರದಿಂದ ಸೋತಿದ್ದಾರೆ.
ಅಮನ್ ಮೊಲ ಅವಧಿಯಲ್ಲಿ ಜಪಾನ್ ಕುಸ್ತಿಪಟು ವಿರುದ್ದ 0-8 ಹಿನ್ನಡೆ ಅನುಭವಿಸಿದರು. ಹಿಗುಚಿ ಅಂತಿಮವಾಗಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ 10-0 ಅಂತರದಿಂದ ಜಯ ಸಾಧಿಸಿದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮನ್ ಅವರು ಅಲ್ಬೇನಿಯಾದ ಮಾಜಿ ವಿಶ್ವ ಚಾಂಪಿಯನ್ ಝೆಲಿಮ್ಖಾನ್ರನ್ನು 12-0 ಅಂತರದಿಂದ ಸುಲಭವಾಗಿ ಮಣಿಸಿದರು.
ಇದಕ್ಕೂ ಮೊದಲು ನಡೆದ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಅಮನ್ ಅವರು ನಾರ್ತ್ ಮೆಸಿಡೋನಿಯಾದ ವ್ಲಾಡಿಮಿರ್ ಎಗೊರೊವ್ರನ್ನು ತಾಂತ್ರಿಕ ಶ್ರೇಷ್ಠತೆ ಆಧಾರದಲ್ಲಿ 10-0 ಅಂತರದಿಂದ ಮಣಿಸಿದರು. ಈ ಮೂಲಕ ಅಂತಿಮ-8 ಘಟ್ಟ ತಲುಪಿದ್ದಾರೆ.
ಅಮನ್ರ ಆಲ್ರೌಂಡ್ ದಾಳಿಗೆ ತತ್ತರಿಸಿದ ಎಗೊರೊವ್ ಅವರು ವೈದ್ಯರಿಂದ ಉಪಚಾರ ಪಡೆದರು. ಮೊದಲ ಸುತ್ತಿನ ನಂತರ ಸ್ವಲ್ಪ ತೊಂದರೆಗೆ ಒಳಗಾದಂತೆ ಕಂಡುಬಂದರು. ಅಮನ್ ಇನ್ನೂ ಎರಡು ಅಂಕ ಗಳಿಸಿದ ಕಾರಣ ಇಗೊರೊವ್ ಪುಟಿದೇಳಲು ಸಾಧ್ಯವಾಗಲಿಲ್ಲ. ಅಮನ್ ಮಾಜಿ ಯುರೋಪಿಯನ್ ಚಾಂಪಿಯನ್ ಇಗೊರೊವ್ರನ್ನು ಏಕಪಕ್ಷೀಯವಾಗಿ ಮಣಿಸಿದರು.
ಅಮನ್ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಪುರುಷರ ಕುಸ್ತಿಪಟುವಾಗಿದ್ದಾರೆ.