ನಾನು ಆರ್ ಸಿಬಿ ವಿರುದ್ಧದ ಪಂದ್ಯ ಆಡಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಹಂತಕ್ಕೇರುತ್ತಿತ್ತು: ರಿಷಬ್ ಪಂತ್
Photo: PTI
ಹೊಸದಿಲ್ಲಿ: ತಾನು ಒಂದು ಪಂದ್ಯದಿಂದ ಅಮಾನತುಗೊಂಡಿರುವುದು, ನಮ್ಮ ತಂಡ ಪ್ಲೇಆಫ್ ನಲ್ಲಿ ಸ್ಥಾನ ಪಡೆಯುವ ಕನಸಿಗೆ ತಣ್ಣೀರೆರಚಿತು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅಭಿಪ್ರಾಯಪಟ್ಟಿದ್ದಾರೆ.
ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ತಾನು ಮೈದಾನಕ್ಕೆ ಇಳಿದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಈ ಮಹತ್ವದ ಪಂದ್ಯವನ್ನು ಗೆಲ್ಲುವ ಸಾಧ್ಯತೆ ಅಧಿಕ ಇತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.
ಮೂರನೇ ಬಾರಿಗೆ ನಿಧಾನಗತಿಯ ಬೌಲಿಂಗ್ ನಡೆಸಿದ ಅಪರಾಧಕ್ಕಾಗಿ ಭಾನುವಾರ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಆಡದಂತೆ ಪಂತ್ ಅವರನ್ನು ಒಂದು ಪಂದ್ಯದ ಮಟ್ಟಿಗೆ ಅಮಾನತುಗೊಳಿಸಲಾಗಿತ್ತು. ಪಂತ್ ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂದ್ಯವನ್ನು 47 ರನ್ ಗಳ ಭಾರಿ ಅಂತರದಿಂದ ಸೋತು ನಿವ್ವಳ ರನ್ ರೇಟ್ ಗಣನೀಯವಾಗಿ ಕುಸಿಯಲು ಕಾರಣವಾಗಿತ್ತು.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇಆಫ್ ಗೆ ತೇರ್ಗಡೆಯಾಗುತ್ತದೆಯೋ ಇಲ್ಲವೇ ಎನ್ನುವುದಕ್ಕೆ ಇತರ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
"ನಾನು ಆ ಪಂದ್ಯ ಆಡಿದ್ದರೆ ಖಚಿತವಾಗಿ ಆ ಪಂದ್ಯ ಗೆಲ್ಲುತ್ತಿದ್ದೆವು ಎಂದು ಹೇಳಲಾರೆ. ಆದರೆ ಆ ಪಂದ್ಯದಲ್ಲಿ ನಾನು ಆಡಿದ್ದರೆ ನಮ್ಮ ಪ್ಲೇಆಫ್ ಹಂತಕ್ಕೇರುವ ಅವಕಾಶ ಉತ್ತಮವಾಗಿ ಇರುತ್ತಿತ್ತು" ಎಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 19 ರನ್ ಗಳಿಂದ ಗೆದ್ದ ಬಳಿಕ ಪಂತ್ ನುಡಿದರು.
ಆರಂಭಿಕ ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದರೂ, ಅಭಿಯಾನದ ಕೊನೆಯ ಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಡಿಸಿ ತಂಡ ಪ್ಲೇಆಫ್ ಕನಸನ್ನು ಕೊನೆಯವರೆಗೂ ಜೀವಂತವಾಗಿರಿಸಿಕೊಂಡಿತ್ತು. ಆದರೆ ದುರದೃಷ್ಟವಶಾತ್ ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗಿರುವುದು ಇವರಿಗೆ ಸವಾಲಾಗಿ ಪರಿಣಮಿಸಿತು. ವಿವಿಧ ಗಾಯಗಳಿಂದಾಗಿ ಇಶಾಂತ್ ಶರ್ಮಾ, ಖಲೀಲ್ ಅಹ್ಮದ್ ಮತ್ತು ಮುಖೇಶ್ ಕುಮಾರ್ ಅವರಂಥ ಬೌಲರ್ ಗಳು ಹಾಗೂ ಡೇವಿಡ್ ವಾರ್ನರ್ ಅವರಂಥ ಆರಂಭಿಕ ಬ್ಯಾಟ್ಸ್ಮನ್ ಗಳು ಪಂದ್ಯದಿಂದ ಹೊರಗುಳಿಯಬೇಕಾಯಿತು.