ದಿಲ್ಲಿ ರಣಜಿ ತಂಡ: ವಿರಾಟ್ ಕೊಹ್ಲಿ, ರಿಷಭ್ ಪಂತ್ ಗೆ ಸ್ಥಾನ

ರಿಷಭ್ ಪಂತ್ , ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ: ಮುಂದಿನ ವಾರ ಆರಂಭವಾಗಲಿರುವ ಸೌರಾಷ್ಟ್ರ ಕ್ರಿಕೆಟ್ ತಂಡದ ವಿರುದ್ಧ ರಣಜಿ ಟ್ರೋಫಿ ಪಂದ್ಯಕ್ಕೆ ಆಯುಷ್ ಬದೋನಿ ನೇತೃತ್ವದ ದಿಲ್ಲಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಲಾಗಿದ್ದು ಆದರೆ ಸ್ಟಾರ್ ಆಟಗಾರನ ಭಾಗವಹಿಸುವಿಕೆಯು ಅವರ ಲಭ್ಯತೆಯನ್ನು ಅವಲಂಬಿಸಿದೆ.
ಕೊಹ್ಲಿ ದಿಲ್ಲಿ ತಂಡದಲ್ಲಿ ಇರಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಅವರು ಆಡುವ 11ರ ಬಳಗದಲ್ಲಿರುವ ಕುರಿತಾಗಿ ಸ್ಪಷ್ಟತೆ ಇರಲಿಲ್ಲ. ಕೊಹ್ಲಿ ಅವರ ಕುತ್ತಿಗೆ ಉಳುಕಿದ್ದು, ಅದಕ್ಕಾಗಿ ಇಂಜೆಕ್ಷನ್ ಕೂಡ ತೆಗೆದುಕೊಂಡಿದ್ದಾರೆ.
ರಿಷಭ್ ಪಂತ್ ದೀರ್ಘ ಸಮಯದ ನಂತರ ದಿಲ್ಲಿ ಪರ ಆಡಲು ಸಜ್ಜಾಗಿದ್ದಾರೆ. ಆದರೆ ಅವರ ದಿಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಲು ನಿರಾಕರಿಸಿದ್ದಾರೆ. ನನ್ನನ್ನು ಕೇವಲ ಆಟಗಾರನಾಗಿ ಪರಿಗಣಿಸಬೇಕು. ಕೇವಲ ಒಂದು ಪಂದ್ಯಕ್ಕೋಸ್ಕರ ತಂಡದ ನಾಯಕತ್ವವಹಿಸಲು ನಾನು ಇಷ್ಟಪಡಲಾರೆ ಎಂದು ದಿಲ್ಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಹನ್ ಜೇಟ್ಲಿಗೆ ವಿಕೆಟ್ಕೀಪರ್-ಬ್ಯಾಟರ್ ಪಂತ್ ಮಾಹಿತಿ ನೀಡಿದ್ದಾರೆ.
ಪಂತ್ ಅವರು ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಅವರು ದಿಲ್ಲಿ ಆಡಲಿರುವ ಮುಂದಿನ ಸುತ್ತಿನ ಪಂದ್ಯಗಳಲ್ಲಿ ಪಂತ್ ಆಡುವ ಸಾಧ್ಯತೆ ಇಲ್ಲ.
ಆಯುಷ್ ಬದೋನಿ ನವೆಂಬರ್ನಲ್ಲಿ ರಣಜಿ ಋತು ಆರಂಭವಾಗುವ ಮೊದಲೇ ಹಿಮ್ಮತ್ ಸಿಂಗ್ ಬದಲಿಗೆ ನಾಯಕನಾಗಿ ನೇಮಕಗೊಂಡಿದ್ದರು.
ದಿಲ್ಲಿ ರಣಜಿ ತಂಡವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಜನವರಿ 20ರಂದು ಆರಂಭವಾಗಲಿರುವ ಪಂದ್ಯಕ್ಕೆ ಮತ್ತೊಂದು ಜಂಬೊ ತಂಡವು ತೆರಳಲಿದೆ ಎಂದು ವರದಿಯಾಗಿದೆ. ಆಯ್ಕೆದಾರರು ಅಂಡರ್-23 ವಯೋಮಿತಿಯ ಕೆಲವು ಆಟಗಾರರನ್ನು ತಂಡದಲ್ಲಿ ಸೇರಿಸಲು ಮುಂದಾಗಿದ್ದಾರೆ.
ದಿಲ್ಲಿ ತಂಡ ಸೌರಾಷ್ಟ್ರ ಹಾಗೂ ರೈಲ್ವೇಸ್ ವಿರುದ್ಧ ಕ್ರಮವಾಗಿ ರಾಜ್ಕೋಟ್ ಹಾಗೂ ದಿಲ್ಲಿಯಲ್ಲಿ ಕೊನೆಯ ಎರಡು ಪಂದ್ಯಗಳನ್ನು ಆಡಲಿದೆ. ಭಾರತದ ಪ್ರಮುಖ ದೇಶಿ ಸ್ಪರ್ಧಾವಳಿಯಲ್ಲಿ ಡಿ ಗುಂಪಿನಿಂದ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಬೇಕಾದರೆ ದಿಲ್ಲಿ ತಂಡ ಕೊನೆಯ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಬೇಕಾಗಿದೆ.