30 ಎಸೆತಗಳಲ್ಲಿ 58 ರನ್ ಗಳಿಸಿದ್ದರೂ ಐಪಿಎಲ್ನಲ್ಲಿ ಅನಪೇಕ್ಷಿತ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆದ ಶಾರೂಕ್ ಖಾನ್
ಶಾರೂಕ್ ಖಾನ್ | PC : X \ @IPL
ಅಹ್ಮದಾಬಾದ್ : ಆರ್ಸಿಬಿ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್ ಶಾರೂಕ್ ಖಾನ್ 30 ಎಸೆತಗಳಲ್ಲಿ 58 ರನ್ ಗಳಿಸಿದ್ದರೂ ಐಪಿಎಲ್ನಲ್ಲಿ ಅನಪೇಕ್ಷಿತ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಶಾರೂಕ್ ಐಪಿಎಲ್ನಲ್ಲಿ ತನ್ನ ಚೊಚ್ಚಲ ಅರ್ಧಶತಕ ಗಳಿಸಿದರು. ಟಿ20 ಲೀಗ್ನಲ್ಲಿ ಮೊದಲ ಬಾರಿ 50ಕ್ಕೂ ಅಧಿಕ ರನ್ ಗಳಿಸಲು 36 ಇನಿಂಗ್ಸ್ಗಳನ್ನು ತೆಗೆದುಕೊಂಡರು. ಈ ಮೂಲಕ ಐಪಿಎಲ್ನಲ್ಲಿ ಮೊದಲ ಬಾರಿ 50 ಪ್ಲಸ್ ಸ್ಕೋರ್ ಗಳಿಸಲು ದೀರ್ಘ ಸಮಯ ತೆಗೆದುಕೊಂಡ ಸ್ಪೆಷಲಿಸ್ಟ್ ಬ್ಯಾಟರ್ ಅಥವಾ ಆಲ್ರೌಂಡರ್ ಎನಿಸಿಕೊಂಡಿದ್ದಾರೆ.
ಶಾರೂಕ್ಗಿಂತ ಮೊದಲು ಆಸ್ಟ್ರೇಲಿಯದ ಬ್ಯಾಟರ್ ಸ್ಟೀವ್ ಸ್ಮಿತ್ ಹೆಸರಲ್ಲಿ ಈ ಅನಪೇಕ್ಷಿತ ದಾಖಲೆ ಇತ್ತು. ಸ್ಮಿತ್ ಐಪಿಎಲ್ನಲ್ಲಿ ತನ್ನ ಮೊದಲ ಅರ್ಧಶತಕ ಗಳಿಸಲು 31 ಇನಿಂಗ್ಸ್ಗಳು ಬೇಕಾಗಿತ್ತು.
ಕೇವಲ ಐವರು ಬ್ಯಾಟರ್ಗಳಾದ (ಬೌಲಿಂಗ್ ಆಲ್ರೌಂಡರ್ಗಳು) ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಆರ್.ಅಶ್ವಿನ್, ಹರ್ಭಜನ್ ಸಿಂಗ್ ಹಾಗೂ ರಶೀದ್ ಖಾನ್ ತಮ್ಮ ಚೊಚ್ಚಲ ಐಪಿಎಲ್ ಅರ್ಧಶತಕ ಗಳಿಸಲು ದೀರ್ಘ ಸಮಯ ತೆಗೆದುಕೊಂಡಿದ್ದರು.
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದಿದ್ದ ಹರಾಜಿನ ವೇಳೆ ಶಾರೂಕ್ರನ್ನು ಗುಜರಾತ್ ತಂಡ 7.4 ಕೋಟಿ ರೂ. ನೀಡಿ ಖರೀದಿಸಿತ್ತು.
ಇದಕ್ಕೂ ಮೊದಲು ಶಾರೂಕ್ ಅವರು ಪಂಜಾಬ್ ಕಿಂಗ್ಸ್ ತಂಡವನ್ನು 2021ರಿಂದ 23ರ ತನಕ ಪ್ರತಿನಿಧಿಸಿದ್ದರು.