ಡೆವೊನ್ ಕಾನ್ವೆಗೆ ಸರ್ಜರಿ, ಮೇ ತನಕ ಐಪಿಎಲ್ ಗೆ ಅಲಭ್ಯ
ಡೆವೊನ್ ಕಾನ್ವೆ | Photo: X
ಹೊಸದಿಲ್ಲಿ: ನ್ಯೂಝಿಲ್ಯಾಡ್ ಓಪನರ್ ಡೆವೊನ್ ಕಾನ್ವೆ ತನ್ನ ಎಡ ಹೆಬ್ಬೆರಳ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು 2024ರ ಐಪಿಎಲ್ ಗಿಂತ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತೀವ್ರ ಹಿನ್ನಡೆ ಅನುಭವಿಸಿದೆ. ಕಾನ್ವೆಗೆ ಚೇತರಿಸಿಕೊಳ್ಳಲು ಅಂದಾಜು ಎಂಟು ವಾರಗಳ ಅಗತ್ಯವಿದೆ.
ಆಸ್ಟ್ರೇಲಿಯ ವಿರುದ್ಧ ಎರಡನೇ ಟಿ20 ಪಂದ್ಯದ ವೇಳೆ ಕಾನ್ವೆ ಗಾಯಗೊಂಡಿದ್ದರು. ಆಗ ಅವರು ಮೈದಾನದಿಂದ ಹೊರ ನಡೆದು ಎಕ್ಸ್-ರೇ ಪರೀಕ್ಷೆಗೆ ಒಳಗಾಗಿದ್ದರು. ಎಕ್ಸ್-ರೇನಲ್ಲಿ ಹೆಬ್ಬೆರಳಲ್ಲಿ ಬಿರುಕುಬಿಟ್ಟಿರುವುದು ಗೊತ್ತಾಗಿದೆ. ಹೆಚ್ಚಿನ ಸ್ಕ್ಯಾನಿಂಗ್ ಹಾಗೂ ಸ್ಪೆಷಲಿಸ್ಟ್ ಗಳ ಸಂಪರ್ಕದ ನಂತರ ಕಾನ್ವೆಗೆ ಸರ್ಜರಿಯ ಅಗತ್ಯ ಇದೆ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಹಲವು ಸ್ಕ್ಯಾನಿಂಗ್ ಹಾಗೂ ಸ್ಪೆಷಲಿಸ್ಟ್ ಸಲಹೆಯ ನಂತರ ಕಾನ್ವೆಗೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿದೆ. ಅವರು ಚೇತರಿಸಿಕೊಳ್ಳಲು ಕನಿಷ್ಠ 8 ವಾರಗಳ ಅಗತ್ಯವಿದೆ ಎಂದು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಕಾನ್ವೆ ಚೇತರಿಸಿಕೊಳ್ಳಲು ಎಂಟು ವಾರ ನಿಗದಿಪಡಿಸಿರುವ ಕಾರಣ ಮಾರ್ಚ್ 22ರಿಂದ ಆರಂಭವಾಗಲಿರುವ ಮುಂಬರುವ ಐಪಿಎಲ್ ಆವೃತ್ತಿಯ ಆರಂಭಿಕ ಪಂದ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ.
ಕಾನ್ವೆ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಹೆನ್ರಿ ನಿಕೊಲ್ಸ್ರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು.