ಸಾರ್ವಕಾಲಿಕ ಇಂಡಿಯಾ ಇಲೆವೆನ್ ನಲ್ಲಿ ಧೋನಿಗೆ ಸ್ಥಾನ ನೀಡದ್ದಕ್ಕೆ ಕ್ಷಮೆಕೋರಿದ ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್ , ಎಂ.ಎಸ್. ಧೋನಿ | PC : PTI
ಹೊಸದಿಲ್ಲಿ : ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ತಾನು ಆಯ್ಕೆ ಮಾಡಿರುವ ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡದ ಆಡುವ 11ರ ಬಳಗದಿಂದ ಲೆಜೆಂಡರಿ ವಿಕೆಟ್ ಕೀಪರ್ ಹಾಗೂ ನಾಯಕ ಎಂ.ಎಸ್. ಧೋನಿಯವರನ್ನು ಹೊರಗಿಟ್ಟು ಅಚ್ಚರಿ ಮೂಡಿಸಿದ್ದ ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್, ತನ್ನ ಈ ಎಡವಟ್ಟಿಗೆ ಕ್ಷಮೆ ಕೋರಿದ್ದಾರೆ. ಸಹೋದರರೇ, ನನ್ನಿಂದ ದೊಡ್ಡ ತಪ್ಪಾಗಿದೆ ಎಂದು ಹೇಳಿದ್ದಾರೆ.
ಧೋನಿ ಅವರನ್ನು ಆಡುವ 11ರ ಬಳಗದಿಂದ ಹೊರಗಿಟ್ಟಿರುವುದು ನನ್ನ ದೊಡ್ಡ ತಪ್ಪಾಗಿದೆ. ಧೋನಿ ಅವರನ್ನು ತನ್ನ ಆಯ್ಕೆಯ ಆಟಗಾರರ ಪಟ್ಟಿಯಲ್ಲಿ ಸೇರಿಸಲು ಮರೆತುಬಿಟ್ಟೆ ಎಂದು ಒಪ್ಪಿಕೊಂಡರು.
ಭಾರತದ ಪರ ಸ್ವತಃ ವಿಕೆಟ್ ಕೀಪರ್ ಆಗಿ ಆಡಿರುವ ಕಾರ್ತಿಕ್, ಧೋನಿ ಅವರನ್ನು ಬಾಯ್ತುಂಬ ಹೊಗಳಿದರು.
ಧೋನಿ ಅವರು ಕ್ರಿಕೆಟ್ ಕಂಡ ಓರ್ವ ಶ್ರೇಷ್ಠ ಆಟಗಾರ. ಧೋನಿ ಅವರು ಏಳನೇ ಕ್ರಮಾಂಕದ ಬ್ಯಾಟಿಂಗ್ ಗೆ ಸ್ವಯಂ ಆಯ್ಕೆಯಾಗಿದ್ದು, ಭಾರತದ ಯಾವುದೇ ತಂಡಕ್ಕೆ ನಾಯಕನಾಗಬಲ್ಲರು ಎಂದರು.
ಎಲ್ಲ ಮಾದರಿಯ ಕ್ರಿಕೆಟ್ ಗೆ ಕಾರ್ತಿಕ್ ಆಯ್ಕೆ ಮಾಡಿರುವ ಸಾರ್ವಕಾಲಿಕ ಇಂಡಿಯಾ ಇಲೆವೆನ್ ನಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ರೋಹಿತ್ ಶರ್ಮಾ ಆರಂಭಿಕ ಆಟಗಾರರಾಗಿದ್ದರೆ, ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡುಲ್ಕರ್ ಕ್ರಮವಾಗಿ 3ನೇ ಹಾಗೂ 4ನೇ ಕ್ರಮಾಂಕದಲ್ಲಿದ್ದಾರೆ. ವಿರಾಟ್ ಕೊಹ್ಲಿಗೆ 5ನೇ ಕ್ರಮಾಂಕ ನೀಡಿದ್ದಾರೆ. ಆಲ್ರೌಂಡರ್ ಸ್ಥಾನಕ್ಕಾಗಿ ಯುವರಾಜ್ ಸಿಂಗ್ ಹಾಗೂ ರವೀಂದ್ರ ಜಡೇಜರನ್ನು ಕಾರ್ತಿಕ್ ಆಯ್ಕೆ ಮಾಡಿದ್ದಾರೆ. ಸ್ಪಿನ್ ವಿಭಾಗದಲ್ಲಿ ಭಾರತದ ಇಬ್ಬರು ಅತ್ಯಂತ ಯಶಸ್ವಿ ಸ್ಪಿನ್ನರ್ಗಳಾದ ಆರ್.ಅಶ್ವಿನ್ ಹಾಗೂ ಅನಿಲ್ ಕುಂಬ್ಳೆ ಅವರಿದ್ದಾರೆ.ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಝಹೀರ್ ಖಾನ್ ಅವರಿದ್ದಾರೆ. ಕಾರ್ತಿಕ್ ಅವರು ಭಾರತೀಯ ಕ್ರಿಕೆಟ್ಗೆ ಮಹತ್ವದ ಕೊಡುಗೆ ನೀಡಿರುವ ಹರ್ಭಜನ್ ಸಿಂಗ್ ರನ್ನು 12ನೇ ಆಟಗಾರನಾಗಿ ನೇಮಿಸಿದ್ದಾರೆ.