ಹಳೆಯ ಎದುರಾಳಿ ಆ್ಯಂಡಿ ಮರ್ರೆಯನ್ನು ಕೋಚ್ ಆಗಿ ನೇಮಿಸಿದ ಜೊಕೊವಿಕ್
ನೊವಾಕ್ ಜೊಕೊವಿಕ್ | PC : PTI
ಮುಂಬೈ : 24 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸರ್ಬಿಯದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ತನ್ನ ಕೋಚ್ ಆಗಿ ದೀರ್ಘಕಾಲೀನ ಎದುರಾಳಿ ಬ್ರಿಟನ್ನ ಆ್ಯಂಡಿ ಮರ್ರೆ ಅವರನ್ನು ನೇಮಿಸಿದ್ದಾರೆ. ಈಗಾಗಲೇ ನಿವೃತ್ತಿಯಾಗಿರುವ ಮರ್ರೆ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಆರಂಭಕ್ಕೆ ಮುನ್ನ ತನ್ನ ನೂತನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
‘‘ನನ್ನ ಅತ್ಯಂತ ದೊಡ್ಡ ಎದುರಾಳಿಗಳಲ್ಲಿ ಒಬ್ಬರಾಗಿರುವವರು ಇನ್ನು ಅಂಗಣದಲ್ಲಿ ನನ್ನ ಬದಿಯಲ್ಲಿ ಇರುತ್ತಾರೆ. ಈ ಬಾರಿ ಅವರು ನನ್ನ ಕೋಚ್ ಆಗಿ ಕೆಲಸ ಮಾಡುತ್ತಾರೆ. ಮುಂಬರುವ ಟೆನಿಸ್ ಋತುವನ್ನು ಆ್ಯಂಡಿಯೊಂದಿಗೆ ಆರಂಭಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ಮೆಲ್ಬರ್ನ್ನಲ್ಲಿ ಅವರು ನನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ. ನಮ್ಮ ಕ್ರೀಡಾ ಬದುಕಿನ ಉದ್ದಕ್ಕೂ ನಾವು ಮೆಲ್ಬರ್ನ್ನಲ್ಲಿ ಹಲವಾರು ಅಮೋಘ ಕ್ಷಣಗಳನ್ನು ಜೊತೆಯಾಗಿ ಕಳೆದಿದ್ದೇವೆ’’ ಎಂದು ಜೊಕೋವಿಕ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮೂರು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಮರ್ರೆ, ಆಗಸ್ಟ್ನಲ್ಲಿ ಒಲಿಂಪಿಕ್ಸ್ನಲ್ಲಿ ಆಡಿದ ಬಳಿಕ ಸ್ಪರ್ಧಾತ್ಮಕ ಟೆನಿಸ್ನಿಂದ ನಿವೃತ್ತಿಗೊಂಡಿದ್ದಾರೆ. ‘‘ಜೊಕೊವಿಕ್ ಜೊತೆಗೆ ಕೆಲಸ ಮಾಡುವ ಬಗ್ಗೆ ರೋಮಾಂಚಿತನಾಗಿದ್ದೇನೆ. ಬದಲಾವಣೆಗಾಗಿ, ನಾವಿಬ್ಬರು ನೆಟ್ ನ ಒಂದೇ ಬದಿಯಲ್ಲಿ ಇರುವ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ’’ ಎಂದು ಮರ್ರೆ ಹೇಳಿದ್ದಾರೆ.
‘‘ಮುಂಬವರು ವರ್ಷದಲ್ಲಿ ಅವರ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಅವರಿಗೆ ನೆರವು ನೀಡಲು ಸಿಕ್ಕಿರುವ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’’ ಎಂಬುದಾಗಿಯೂ ಅವರು ನುಡಿದರು.
ಮರ್ರೆ ಆಡುವ ದಿನಗಳಲ್ಲಿ ಚಿತ್ರೀಕರಿಸಲಾಗಿರುವ ತನ್ನ ಮತ್ತು ಮರ್ರೆಯ ವೀಡಿಯೊವೊಂದನ್ನು ಜೊಕೊವಿಕ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಾಕಿದ್ದಾರೆ. ‘‘ಅವರು ನಿವೃತ್ತಿಯನ್ನು ಯಾವತ್ತೂ ಇಷ್ಟಪಟ್ಟಿರಲಿಲ್ಲ’’ ಎಂಬುದಾಗಿಯೂ ಅವರು ತಮಾಷೆಯಾಗಿ ಬರೆದಿದ್ದಾರೆ.
37 ವರ್ಷದ ಜೊಕೊವಿಕ್ ದಾಖಲೆಯ 10 ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. ಈ ಅವಧಿಯಲ್ಲಿ, ಅವರು ಈ ಪಂದ್ಯಾವಳಿಯ ನಾಲ್ಕು ಫೈನಲ್ಗಳಲ್ಲಿ ಮರ್ರೆಯನ್ನು ಸೋಲಿಸಿದ್ದಾರೆ.
2024ರಲ್ಲಿ ಜೊಕೊವಿಕ್ರಿಗೆ ಯಾವುದೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ, ಅವರು ವಿಶ್ವ ರ್ಯಾಂಕಿಂಗ್ಸ್ ನಲ್ಲಿ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದಾಗ್ಯೂ, ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಅವರು ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.