ಗೊರಾನ್ ಇವಾನಿಸೆವಿಚ್ ರಿಂದ ಬೇರ್ಪಟ್ಟ ಜೊಕೊವಿಕ್
ನೊವಾಕ್ ಜೊಕೊವಿಕ್ | Photo: PTI
ಬೆಲ್ಗ್ರೇಡ್ : ನನ್ನ ಮತ್ತು ಗೊರಾನ್ ಇವಾನಿಸೆವಿಚ್ ದಾರಿಗಳು ಬೇರ್ಪಟ್ಟಿವೆ ಎಂದು ವಿಶ್ವದ ನಂಬರ್ ವನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಬುಧವಾರ ಘೋಷಿಸಿದ್ದಾರೆ. ಇದರೊಂದಿಗೆ ಅವರ ಐದು ವರ್ಷಗಳ ಒಡನಾಟ ಕೊನೆಗೊಂಡಿದೆ. ಈ ಐದು ವರ್ಷಗಳಲ್ಲಿ ಜೊಕೊವಿಕ್ 12 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಜೊಕೊವಿಕ್ 2001ರ ವಿಂಬಲ್ಡನ್ ಚಾಂಪಿಯನ್ ಗೊರಾನ್ ಇವಾನಿಸೆವಿಚ್ರನ್ನು 2019ರಲ್ಲಿ ತನ್ನ ಕೋಚಿಂಗ್ ತಂಡದ ಸದಸ್ಯರಾಗಿ ಸೇರ್ಪಡೆಗೊಳಿಸಿದ್ದರು. “ಅಂಗಳದಲ್ಲಿ ನಮ್ಮ ನಡುವೆ ಭಿನ್ನಮತವಿದೆ'' ಎಂಬುದಾಗಿ ಜೊಕೊವಿಕ್ ಒಪ್ಪಿಕೊಂಡಿದ್ದರೂ, ಈ ಅವಧಿಯಲ್ಲಿ ಅವರು ಭಾರೀ ಯಶಸ್ಸನ್ನೂ ಪಡೆದಿದ್ದಾರೆ.
ಆದರೆ, ಈ ವರ್ಷದ ಆರಂಭದಿಂದಲೇ ಅವರು “ಕಳಪೆ'' ನಿರ್ವಹಣೆ ನೀಡುತ್ತಿದ್ದಾರೆ. ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಅವರು ಇಟಲಿಯ ಜನ್ನಿಕ್ ಸಿನ್ನರ್ ವಿರುದ್ಧ ಸೋಲನುಭವಿಸಿದ್ದಾರೆ. ಸಿನ್ನರ್ ಬಳಿಕ ಪ್ರಶಸ್ತಿ ಗೆದ್ದಿದ್ದಾರೆ. ಬಳಿಕ, 36 ವರ್ಷದ ಜೊಕೊವಿಕ್ ಇಂಡಿಯನ್ ವೆಲ್ಸ್ ನಲ್ಲಿ ಇಟಲಿಯ ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ಲೂಕ ನರ್ಡಿ ವಿರುದ್ಧ ಮೂರನೇ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ. ಬಳಿಕ ಅವರು ಮಯಾಮಿ ಓಪನ್ನಿಂದ ಹಿಂದೆ ಸರಿದರು.
“ಜೊತೆಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಲು ನಾನು ಮತ್ತು ಗೊರಾನ್ ಕೆಲವು ದಿನಗಳ ಹಿಂದೆ ನಿರ್ಧರಿಸಿದ್ದೇವೆ'' ಎಂದು ಜೊಕೊವಿಕ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.