ಐದು ವರ್ಷಗಳ ಬಳಿಕ ಇಂಡಿಯನ್ ವೆಲ್ಸ್ ಟೂರ್ನಿಗೆ ಜೊಕೊವಿಕ್ ಪುನರಾಗಮನ
ನೊವಾಕ್ ಜೊಕೊವಿಕ್ | Photo: NDTV
ಇಂಡಿಯನ್ ವೆಲ್ಸ್: ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಐದು ವರ್ಷಗಳ ನಂತರ ಮೊದಲ ಬಾರಿ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಗೆ ವಾಪಸಾಗುತ್ತಿದ್ದು, ಪಂದ್ಯಾವಳಿಯಲ್ಲಿ ದಾಖಲೆಯ ಆರನೇ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ವಿಶ್ವದ ಅಗ್ರ ರ್ಯಾಂಕಿನ ಆಟಗಾರ ಜೊಕೊವಿಕ್ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ 2019ರಲ್ಲಿ ಕೊನೆಯ ಬಾರಿ ಸ್ಪರ್ಧಿಸಿದ್ದರು. ಆದರೆ ಆಗ ಅವರು ಮೂರನೇ ಸುತ್ತಿನಲ್ಲಿ ಸೋತಿದ್ದರು. ಕೋವಿಡ್-19 ವಿರುದ್ಧ ಲಸಿಕೆ ತೆಗೆದುಕೊಳ್ಳದ ಕಾರಣ ಜೊಕೊವಿಕ್ ಕಳೆದ ನಾಲ್ಕು ವರ್ಷಗಳಿಂದ ಈ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ.
ಜೊಕೊವಿಕ್ 2008, 2011, 2014, 2015 ಹಾಗೂ 2016ರಲ್ಲಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಜಯಿಸಿದ್ದರು.
ಕಳೆದ ವರ್ಷ ಗಾಯದ ಸಮಸ್ಯೆಯಿಂದ ಸ್ಪರ್ಧೆಯಿಂದ ಹೊರಗುಳಿದಿದ್ದ ಮೂರು ಬಾರಿಯ ಚಾಂಪಿಯನ್ ನಡಾಲ್ ಈ ಬಾರಿ ಆಡುತ್ತಿದ್ದಾರೆ. ಗಾಯದ ಸಮಸ್ಯೆಯ ಕಾರಣದಿಂದ ಈ ವರ್ಷದ ಜನವರಿಯಲ್ಲಿ ನಡಾಲ್ ಆಸ್ಟ್ರೇಲಿಯನ್ ಓಪನ್ನಲ್ಲಿ ಆಡಿರಲಿಲ್ಲ.
ಇಂಡಿಯನ್ ವೆಲ್ಸ್ ಟೂರ್ನಿಯು ಮಾರ್ಚ್ 3ರಿಂದ 17ರ ತನಕ ನಡೆಯಲಿದೆ.
ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಹಾಗೂ ಎಲೆನಾ ರೈಬಾಕಿನಾ ಕೂಡ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ವಿಶ್ವದ 2ನೇ ರ್ಯಾಂಕಿನ ಆಟಗಾರ ಅಲ್ಕರಾಝ್ 2017ರ ನಂತರ ಒಂದೂ ಸೆಟನ್ನು ಸೋಲದೆ ಇಂಡಿಯನ್ ವೆಲ್ಸ್ ಪ್ರಶಸ್ತಿ ಜಯಿಸಿದ್ದರು. 2017ರಲ್ಲಿ ರೋಜರ್ ಫೆಡರರ್ ಈ ಸಾಧನೆ ಮಾಡಿದ್ದರು.
ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಗಳಾದ ಜನ್ನಿಕ್ ಸಿನ್ನೆರ್ ಹಾಗೂ ಅರಿನಾ ಸಬಲೆಂಕಾ ಕೂಡ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ. ಸಬಲೆಂಕಾ ಕಳೆದ ವರ್ಷ ಫೈನಲ್ನಲ್ಲಿ ಸೋತಿದ್ದರು.
ಅಗ್ರ ರ್ಯಾಂಕಿನ ಆಟಗಾರರಾದ 2022ರ ವಿನ್ನರ್ ಟೇಲರ್ ಫ್ರಿಟ್ಝ್, 2023ರ ರನ್ನರ್ಸ್ ಅಪ್ ಡೇನಿಯಲ್ ಮೆಡ್ವೆಡೆವ್, ಆ್ಯಂಡ್ರೆ ರುಬ್ಲೆವ್, ಅಲೆಕ್ಸಾಂಡರ್ ಝ್ವೆರೆವ್ ಹಾಗೂ ಆ್ಯಂಡಿ ಮರ್ರೆ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಅಗ್ರ ರ್ಯಾಂಕಿನ ಆಟಗಾರ್ತಿಯರೆಂದರೆ: ಕೊಕೊ ಗೌಫ್, ಜೆಸ್ಸಿಕಾ ಪೆಗುಲಾ, ನವೊಮಿ ಒಸಾಕಾ, ಆಸ್ಟ್ರೇಲಿಯನ್ ಓಪನ್ ಫೈನಲಿಸ್ಟ್ ಕ್ವಿನ್ವೆನ್ ಝೆಂಗ್, ಮರಿಯಾ ಸಕ್ಕಾರಿ, ಉನ್ಸ್ ಜಾಬೀರ್, ಮರ್ಕೆಟಾ ವೊಂಡ್ರೋಸೋವಾ ಹಾಗೂ ಕರೊಲಿನಾ ಮುಚೋವಾ.