ಆರ್ ಸಿಬಿ ವಿರುದ್ಧ ಆರ್ ಆರ್ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು ಗೊತ್ತೇ?
Photo:X/Gulzar_sahab
ಹೊಸದಿಲ್ಲಿ: ಸೋಲಿನ ಸರಪಳಿ ಕಡಿದುಕೊಂಡು ಪುಟಿದೆದ್ದ ರಾಜಸ್ಥಾನ ರಾಯಲ್ಸ್, ಫಿನೀಕ್ಸ್ ನಂತೆ ಎದ್ದುಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಲ್ಕು ವಿಕೆಟ್ ಗಳಿಂದ ಸದೆಬಡಿಯುವ ಮೂಲಕ 2024ರ ಐಪಿಎಲ್ ನ ಎರಡನೇ ಕ್ವಾಲಿಫೈಯರ್ ಗೆ ಅರ್ಹತೆ ಪಡೆದಿದೆ. ಶುಕ್ರವಾರ ಚೆನ್ನೈನಲ್ಲಿ ನಡೆಯುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಗೆದ್ದಲ್ಲಿ, 2008ರಲ್ಲಿ ಮೊದಲ ಐಪಿಎಲ್ ಗೆದ್ದ ಆರ್ ಆರ್ ಮತ್ತೊಮ್ಮೆ ಫೈನಲ್ ತಲುಪಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಈಗಾಗಲೇ ಅಂತಿಮ ಹಂತ ಪ್ರವೇಶಿಸಿದ್ದು, ಫೈನಲ್ ಕದನ ಭಾನುವಾರ ನಡೆಯಲಿದೆ.
ಆರ್ ಸಿಬಿ ವಿರುದ್ಧದ ಗೆಲುವನ್ನು ನಾಯಕ ಸಂಜು ಸ್ಯಾಮ್ಸನ್ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆರ್.ಅಶ್ವಿನ್ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವಿಡಿಯೊವನ್ನು ತಂಡ ಎಕ್ಸ್ ಪೋಸ್ಟ್ ನಲ್ಲಿ ಹಂಚಿದೆ.
ಸತತ ನಾಲ್ಕು ಸೋಲು ಹಾಗೂ ಐದನೇ ಪಂದ್ಯ ಮಳೆಗೆ ಆಹುತಿಯಾಗಿ ಸ್ಥೈರ್ಯ ಕಳೆದುಕೊಂಡಿದ್ದ ಆರ್ಆರ್, ರೋಚಕ ಕದನದಲ್ಲಿ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಆರ್ ಸಿಬಿಯ ಕಪ್ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿದೆ. ಮೊದಲ ಎಂಟು ಪಂದ್ಯಗಳಲ್ಲಿ ಆರನ್ನು ಸೋತಿದ್ದ ಆರ್ಸಿಬಿ ಪವಾಡಸದೃಶವಾಗಿ ಪ್ಲೇಆಫ್ ತಲುಪಿತ್ತು.
ಕೆಮರೂನ್ ಗ್ರೀನ್ (27) ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ (0) ಅವರನ್ನು ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್ ಗೆ ಅಟ್ಟಿದ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ 4 ಓವರ್ ಗಳಲ್ಲಿ ಕೇವಲ 19 ರನ್ ಗಳಿಗೆ ಎರಡು ವಿಕೆಟ್ ಕಿತ್ತು ಸಹಜವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
"ಕಳೆದ ಕೆಲ ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ತೋರಲಿಲ್ಲ. ನಾವು ಉತ್ತಮ ಮೊತ್ತ ಕಲೆ ಹಾಕಲಿಲ್ಲ. ಬಟ್ಲರ್ ಅವರನ್ನು ಕಳೆದುಕೊಂಡೆವು. ಹೆಟ್ಮಯರ್ ಗಾಯಗೊಂಡರು. ಆದರೆ ಇಂದಿನ ವಿಜಯ ಮಹತ್ವದ್ದು. ಮೊತ್ತ ಬೆನ್ನಟ್ಟುವಲ್ಲಿ ಒಂದಷ್ಟು ಮೊಂಡಾಗಿದ್ದೆವು. ಆದರೆ ಇಂದಿನ ಗೆಲುವು ಆತ್ಮವಿಶ್ವಾಸ ನೀಡಿದೆ. ಪಂದ್ಯದ ಮೊದಲಾರ್ಧದಲ್ಲಿ ನನ್ನ ದೇಹ ಬೇಕಾದಂತೆ ಚಲಿಸುತ್ತಿಲ್ಲ ಎನ್ನುವ ಭಾವನೆ ಇತ್ತು. ಹೊಟ್ಟೆಗೆ ಗಾಯ ಕೂಡಾ ಆಗಿತ್ತು. ನನಗೆ ವಯಸ್ಸಾಗುತ್ತಿದೆ. ಟೆಸ್ಟ್ ಕ್ರಿಕೆಟ್ನಿಂದ ಐಪಿಎಲ್ ಗೆ ಬರುವುದು ಕಷ್ಟ. ಬೌಲಿಂಗ್ ಲಯ ಕಂಡುಕೊಳ್ಳಲು ಸಮಯ ಬೇಕಾಗುತ್ತದೆ. ಆದರೆ ಒಂದು ಬಾರಿ ಫ್ರಾಂಚೈಸಿಗೆ ಬದ್ಧತೆ ನೀಡಿದ ಬಳಿಕ ಇಡೀ ಋತುವಿನಲ್ಲಿ ನಿಮ್ಮೊಂದಿಗೆ ಇರಲು ಬಯಸುತ್ತೇನೆ" ಎಂದು ಅಶ್ವಿನ್ ಪಂದ್ಯದ ಬಳಿಕ ನುಡಿದರು.
ಈ ಪಂದ್ಯದ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ ನಾಯಕನಾಗಿ ಗರಿಷ್ಠ ಗೆಲುವು (31) ಸಾಧಿಸಿದ ಶೇನ್ ವಾರ್ನ್ ದಾಖಲೆಯನ್ನು ಸಂಜು ಸ್ಯಾಮ್ಸನ್ ಸರಿಗಟ್ಟಿದರು.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.