ನನ್ನನ್ನು ಕಿಂಗ್ ಎಂದು ಕರೆಯಬೇಡಿ, ಆ ಪದದಿಂದ ಮುಜುಗರವಾಗುತ್ತಿದೆ: ಅಭಿಮಾನಿಗಳಿಗೆ ಕೊಹ್ಲಿ ಮನವಿ
ವಿರಾಟ್ ಕೊಹ್ಲಿ | Photo: PTI
ಹೊಸದಿಲ್ಲಿ: ನನ್ನನ್ನು ಕಿಂಗ್ ಎಂದು ಕರೆಯಬೇಡಿ. ನನ್ನನ್ನು ಕಿಂಗ್ ಎಂದು ಕರೆದರೆ ನನಗೆ ಮುಜುಗರವಾಗುತ್ತದೆ ಎಂದು ಭಾರತೀಯ ಬ್ಯಾಟಿಂಗ್ ದಂತಕತೆ ವಿರಾಟ್ ಕೊಹ್ಲಿ ತನ್ನ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಮಂಗಳವಾರ ರಾತ್ರಿ ನಡೆದ ಭವ್ಯ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಆರ್ ಸಿ ಬಿ ನೂತನ ಐಪಿಎಲ್ ಜೆರ್ಸಿ ಬಿಡುಗಡೆ ಮಾಡಿದ ನಂತರ ಕೊಹ್ಲಿ ನೆರೆದಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ನನ್ನನ್ನು ಉಲ್ಲೇಖಿಸಿ ಕಿಂಗ್ ಎಂಬ ಪದವನ್ನು ಇನ್ನು ಮುಂದೆ ಬಳಸದಂತೆ 35ರ ಹರೆಯದ ಕ್ರಿಕೆಟಿಗ ತನ್ನ ಅಭಿಮಾನಿಗಳಲ್ಲಿ ವಿನಮ್ರವಾಗಿ ಕೇಳಿಕೊಂಡರು.
ಮೊದಲಿಗೆ ನೀವು ನನ್ನನ್ನು ಕಿಂಗ್ ಎಂದು ಕರೆಯುವುದನ್ನು ನಿಲ್ಲಿಸಬೇಕು. ದಯವಿಟ್ಟು ನನ್ನನ್ನು ವಿರಾಟ್ ಎಂದು ಕರೆಯಿರಿ. ನನ್ನನ್ನು ಆ ಪದದಿಂದ(ಕಿಂಗ್) ಕರೆಯಬೇಡಿ. ಪ್ರತಿ ವರ್ಷವೂ ನೀವು ನನ್ನನ್ನು ಕಿಂಗ್ ಎಂದು ಕರೆಯುವಾಗ ಮುಜುಗರವಾಗುತ್ತದೆ ಎಂದು ನಾಯಕ ಎಫ್ ಡು ಪ್ಲೆಸಿಸ್ ಗೆ ಹೇಳುತ್ತಿದ್ದೆ. ಆದ್ದರಿಂದ ಇನ್ನು ಮುಂದೆ ನನ್ನನ್ನು ವಿರಾಟ್ ಎಂದು ಕರೆಯಬೇಕೆಂದು ನಿಮ್ಮನ್ನು ವಿನಂತಿಸುವೆ. ಕಿಂಗ್ ಎಂಬ ಪದ ಬಳಸಬೇಡಿ. ಅದು ನನಗೆ ಮುಜುಗರ ಉಂಟು ಮಾಡುತ್ತದೆ ಎಂದು ಕಾರ್ಯಕ್ರಮದಲ್ಲಿ ವಿರಾಟ್ ಹೇಳಿದ್ದಾರೆ.
ಆರ್ಸಿಬಿ ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ಐಪಿಎಲ್-2024ರಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಇದು 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯವಾಗಿದೆ.
2008ರಲ್ಲಿ ಐಪಿಎಲ್ ಟೂರ್ನಮೆಂಟ್ ಆರಂಭವಾದ ನಂತರ ಈ ತನಕ ಆರ್ಸಿಬಿ ಐಪಿಎಲ್ ಟ್ರೋಫಿ ಜಯಿಸಿಲ್ಲ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ಬಾರಿ ಚಾಂಪಿಯನ್ ಆಗಿದೆ.