ಸೋದರಿಯರಿಗೆ ನ್ಯಾಯ ದೊರೆಯುವ ತನಕ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯುವುದಿಲ್ಲ: ಬಜರಂಗ್ ಪುನಿಯಾ
Photo: NDTV
ಹೊಸದಿಲ್ಲಿ: ಲೈಂಗಿಕ ಕಿರುಕುಳದ ವಿರುದ್ಧ ಹೋರಾಡುತ್ತಿರುವ ತಮ್ಮ ಸಹೋದರಿಯರು ಮತ್ತು ಪುತ್ರಿಯರಿಗೆ ನ್ಯಾಯ ದೊರೆಯುವ ತನಕ ತಾನು ಸರ್ಕಾರಕ್ಕೆ ವಾಪಸ್ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯುವುದಿಲ್ಲ ಎಂದು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ. ಈ ಕುರಿತು ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
ಭಾರತದ ಕುಸ್ತಿ ಫೆಡರೇಷನ್ನ ನೂತನ ಅಧ್ಯಕ್ಷರಾಗಿ ಲೈಂಗಿಕ ಕಿರುಕುಳ ಆರೋಪ ಹೊತ್ತ ಹಿಂದಿನ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಆಯ್ಕೆಯಾದ ನಂತರ ಸಂಜಯ್ ಸಿಂಗ್ ಅವರು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಈ ವರ್ಷಾಂತ್ಯದೊಳಗೆ ಅಂಡರ್-15 ಮತ್ತು ಅಂಡರ್-20 ವಿಭಾಗದ ರಾಷ್ಟ್ರೀಯ ಕುಸ್ತಿ ಪಂದ್ಯಾಟವನ್ನು ನಡೆಸುವ ಬಗ್ಗೆ ಘೋಷಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಕೇಂದ್ರ ಕ್ರೀಡಾ ಸಚಿವಾಲಯ ಈಗಾಗಲೇ ನೂತನ ಕುಸ್ತಿ ಫೇಡರೇಷನ್ನ ಎಲ್ಲಾ ಪದಾಧಿಕಾರಿಗಳ ಸಹಿತ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಿದೆ.
“ನಾವು ದೇವರ ಮೇಲೆ ಮಾತ್ರ ನಂಬಿಕೆ ಇರಿಸಿದ್ದೇವೆ. ನನ್ನ ಸಹೋದರಿಯರು ಮತ್ತು ಪುತ್ರಿಯರಿಗಾಗಿ ನನ್ನ ಪದ್ಮಶ್ರೀ ವಾಪಸ್ ನೀಡಿದೆ. ಅವರ ಗೌರವಕ್ಕಾಗಿ ಹಾಗೆ ಮಾಡಿದೆ ಅವರಿಗೆ ನ್ಯಾಯ ದೊರಕುವ ತನಕ ನನಗೆ ಯಾವುದೇ ಗೌರವ ಬೇಡ, ಜೈ ಹಿಂದ್,” ಎಂದು ಅವರು ಟ್ವೀಟ್ ಮಾಡಿದ್ದಾರೆ.