ವಿಶ್ವಕಪ್ ಗೆಲುವಿನೊಂದಿಗೆ ಕೋಚಿಂಗ್ ಪಯಣ ಅಂತ್ಯಗೊಳಿಸಿದ ರಾಹುಲ್ ದ್ರಾವಿಡ್
Photo : x.com/BCCI
ಹೊಸದಿಲ್ಲಿ : ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ನಿಂದ ರೋಚಕ ಜಯ ಸಾಧಿಸಿ ಟಿ20 ವಿಶ್ವಕಪ್ ಜಯಿಸಿ 11 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಕುರಿತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ತನ್ನ ಯಶಸ್ವಿ ವೃತ್ತಿಜೀವನದಲ್ಲಿ ವಿಶ್ವ ಚಾಂಪಿಯನ್ ಶಿಪ್ ಜಯಿಸದ ದ್ರಾವಿಡ್ ಕಠಿಣ ಪರಿಸ್ಥಿತಿಯಲ್ಲಿ ತನ್ನ ತಂಡದ ಪರಿಶ್ರಮವನ್ನು ಶ್ಲಾಘಿಸಿದರು.
ಕಳೆದ ಕೆಲವು ಗಂಟೆಗಳಲ್ಲಿ ನಾನು ನಿಜವಾಗಿಯೂ ಪದಗಳ ಕೊರತೆ ಎದುರಿಸಿದೆ. ಕಷ್ಟಕರ ಸಂದರ್ಭದಲ್ಲಿ ತಂಡ ಹೋರಾಡಿದ ರೀತಿಯ ಬಗ್ಗೆ ಹೆಮ್ಮೆಪಡಲು ಸಾಧ್ಯವಾಗಲಿಲ್ಲ.ಮೊದಲ 6 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡ ತಂಡ ಕೊನೆಯ ತನಕ ನಂಬಿಕೆ ಕಳೆದುಕೊಳ್ಳದೆ ಹೋರಾಡುತ್ತಲೇ ಇತ್ತು ಎಂದು ದ್ರಾವಿಡ್ ಹೇಳಿದರು.
ಭಾರತವು ದ್ರಾವಿಡ್ ನಾಯಕತ್ವದಲ್ಲಿ ಕೆರಿಬಿಯನ್ನಲ್ಲಿ ನಡೆದಿದ್ದ 2007ರ ಏಕದಿನ ವಿಶ್ವಕಪ್ನಲ್ಲಿ ಮೊದಲಸುತ್ತಿನಲ್ಲಿ ನಿರ್ಗಮಿಸಿ ನಿರಾಸೆಗೊಳಿಸಿತ್ತು.
ವಿಶ್ವಕಪ್ ಗೆಲುವಿನೊಂದಿಗೆ 2021ರ ಸೆಪ್ಟಂಬರ್ನಲ್ಲಿ ಆರಂಭವಾಗಿರುವ ದ್ರಾವಿಡ್ ಅವರ ಕೋಚಿಂಗ್ ಪಯಣ ಅಂತ್ಯವಾಗಿದೆ.
ಇದು ಎರಡು ವರ್ಷಗಳ ಪಯಣ, ಪ್ರಸಕ್ತ ಟಿ20 ವಿಶ್ವಕಪ್ ನ ಪಯಣವಾಗಿರಲಿಲ್ಲ. ನಾನು 2021ರಲ್ಲಿ ಕೋಚ್ ಆದಾಗಲೇ ತಂಡವನ್ನು ಕಟ್ಟುವ ಕೆಲಸ ಆರಂಭಿಸಿದ್ದೆ. ಈ ಡ್ರೆಸ್ಸಿಂಗ್ ರೂಮ್ನ ಭಾಗವಾಗಿದ್ದಕ್ಕೆ ಖುಷಿಯಾಗುತ್ತಿದೆ. ಇದು ಜೀವಮಾನದ ಸ್ಮರಣೀಯ ಸಂದರ್ಭ. ಇದನ್ನು ಸಾಧ್ಯವಾಗಿಸಿದ ಇಡೀ ತಂಡ ಹಾಗೂ ಸಹಾಯಕ ಸಿಬ್ಬಂದಿಗೆ ಧನ್ಯವಾದಗಳನ್ನು ಹೇಳುವೆ ಎಂದು ದ್ರಾವಿಡ್ ಹೇಳಿದ್ದಾರೆ.