36ನೇ ಟೆಸ್ಟ್ ಶತಕ; ದ್ರಾವಿಡ್, ರೂಟ್ ದಾಖಲೆ ಸರಿಗಟ್ಟಿದ ಸ್ಟೀವ್ ಸ್ಮಿತ್

ಸ್ಟೀವನ್ ಸ್ಮಿತ್ | PTI
ಗಾಲೆ: ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ಧ ಗಾಲೆ ಇಂಟರ್ನ್ಯಾಶನಲ್ ಕ್ರೀಡಾಂಗಣದಲ್ಲಿ ಶುಕ್ರವಾರ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯದ ಹಿರಿಯ ಬ್ಯಾಟರ್ ಸ್ಟೀವನ್ ಸ್ಮಿತ್ ತನ್ನ 36ನೇ ಶತಕವನ್ನು ಸಿಡಿಸಿದರು.
ಸ್ಮಿತ್ ಅವರು ಸಾರ್ವಕಾಲಿಕ ಶ್ರೇಷ್ಠ ಶತಕ ವೀರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಹಾಗೂ ಜೋ ರೂಟ್ರೊಂದಿಗೆ ಐದನೇ ಸ್ಥಾನ ಹಂಚಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಒಟ್ಟು 51 ಟೆಸ್ಟ್ ಶತಕ ಸಿಡಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ವೇಳೆ ಸ್ಮಿತ್ 10,000 ರನ್ ಪೂರೈಸಿದ 15ನೇ ಆಟಗಾರ ಎನಿಸಿಕೊಂಡಿದ್ದರು. ಅಲನ್ ಬಾರ್ಡರ್, ಸ್ಟೀವ್ ವಾ ಹಾಗೂ ರಿಕಿ ಪಾಂಟಿಂಗ್ ನಂತರ ಈ ಸಾಧನೆ ಮಾಡಿದ ಆಸ್ಟ್ರೇಲಿಯದ 4ನೇ ಬ್ಯಾಟರ್ ಎನಿಸಿಕೊಂಡಿದ್ದರು.
ಸ್ಮಿತ್ ಸಕ್ರಿಯ ಆಟಗಾರರ ಪೈಕಿ ಜೋ ರೂಟ್(12,972 ರನ್)ನಂತರ 10 ಸಾವಿರ ರನ್ ಗಳಿಸಿದ 2ನೇ ಆಟಗಾರನಾಗಿದ್ದಾರೆ.
ಆಸ್ಟ್ರೇಲಿಯ ತಂಡವು 37 ರನ್ಗೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ 35ರ ಹರೆಯದ ಸ್ಮಿತ್ ಬ್ಯಾಟಿಂಗ್ಗೆ ಇಳಿದಿದ್ದರು.
ವಿಕೆಟ್ಕೀಪರ್-ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರೊಂದಿಗೆ ದ್ವಿಶತಕದ ಜೊತೆಯಾಟ ನಡೆಸಿದ ಸ್ಮಿತ್ ಆಸ್ಟ್ರೇಲಿಯ ತಂಡವು ಶ್ರೀಲಂಕಾದ ಮೊದಲ ಇನಿಂಗ್ಸ್ ಮೊತ್ತ 257 ರನ್ ಮೀರಿ ನಿಲ್ಲಲು ನೆರವಾದರು.
► ಗರಿಷ್ಠ ಟೆಸ್ಟ್ ಶತಕ ಗಳಿಸಿದ ಬ್ಯಾಟರ್ಗಳು:
ಸಚಿನ್ ತೆಂಡುಲ್ಕರ್(ಭಾರತ)-51
ಜಾಕಸ್ ಕಾಲಿಸ್(ದಕ್ಷಿಣ ಆಫ್ರಿಕಾ)-45
ರಿಕಿ ಪಾಂಟಿಂಗ್(ಆಸ್ಟ್ರೇಲಿಯ)-41
ಕುಮಾರ ಸಂಗಕ್ಕರ(ಶ್ರೀಲಂಕಾ)-38
ಸ್ಟೀವ್ ಸ್ಮಿತ್(ಆಸ್ಟ್ರೇಲಿಯ)-36
ಜೋ ರೂಟ್(ಇಂಗ್ಲೆಂಡ್)-36
ರಾಹುಲ್ ದ್ರಾವಿಡ್(ಭಾರತ)-36