ಕೇರಳ ತಂಡದ ವಿರುದ್ಧ ಡ್ರಾ | 3ನೇ ಬಾರಿ ರಣಜಿ ಚಾಂಪಿಯನ್ಸ್ ಕಿರೀಟ ಧರಿಸಿದ ವಿದರ್ಭ

PC : X
ನಾಗ್ಪುರ: ಕೇರಳ ಕ್ರಿಕೆಟ್ ತಂಡದ ವಿರುದ್ಧ ಡ್ರಾ ಸಾಧಿಸಿದ ವಿದರ್ಭ ತಂಡವು 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ಸ್ ಕಿರೀಟವನ್ನು ಧರಿಸಿದೆ.
ಮೊದಲ ಇನಿಂಗ್ಸ್ನಲ್ಲಿ ಗಳಿಸಿರುವ ಮುನ್ನಡೆಯ ಆಧಾರದಲ್ಲಿ ವಿದರ್ಭ ತಂಡಕ್ಕೆ ಮೂರನೇ ಬಾರಿ ರಣಜಿ ಟ್ರೋಫಿಯು ಒಲಿದಿದೆ. ಅದು ಈ ಹಿಂದೆ 2017-18 ಹಾಗೂ 2018-19ರಲ್ಲಿ ರಣಜಿ ರಾಜನಾಗಿ ಹೊರಹೊಮ್ಮಿತ್ತು.
2023ರ ಎಪ್ರಿಲ್ನಲ್ಲಿ ಬಿಸಿಸಿಐ ಎಲ್ಲ ದೇಶಿ ಟೂರ್ನಿಗಳ ಬಹುಮಾನ ಮೊತ್ತವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ರಣಜಿ ಚಾಂಪಿಯನ್ ವಿದರ್ಭ ತಂಡ 5 ಕೋ.ರೂ. ಹಾಗೂ ರನ್ನರ್ಸ್ ಅಪ್ ತಂಡ ಕೇರಳ 3 ಕೋ.ರೂ. ಬಹುಮಾನವನ್ನು ಗೆದ್ದುಕೊಂಡಿವೆ.
ವಿದರ್ಭ ತಂಡವು ಮೊದಲ ಬಾರಿ ಫೈನಲ್ ಪಂದ್ಯವನ್ನಾಡಿದ ಕೇರಳ ತಂಡವನ್ನು 342 ರನ್ಗೆ ನಿಯಂತ್ರಿಸಿ ತನ್ನ ಮೊದಲ ಇನಿಂಗ್ಸ್ನಲ್ಲಿ 37 ರನ್ ಮುನ್ನಡೆ ಪಡೆದಿತ್ತು. ಮೊದಲ ಇನಿಂಗ್ಸ್ನ ಮುನ್ನಡೆಯ ಲಾಭ ಪಡೆದ ವಿದರ್ಭ ಚಾಂಪಿಯನ್ಸ್ ಪಟ್ಟಕ್ಕೇರಿತು.
ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಮ್ನಲ್ಲಿ 5ನೇ ಹಾಗೂ ಕೊನೆಯ ದಿನವಾದ ರವಿವಾರ ವಿದರ್ಭ ತಂಡವು ಕರುಣ್ ನಾಯರ್ ಶತಕದ(135 ರನ್)ಬಲದಿಂದ 9 ವಿಕೆಟ್ಗಳ ನಷ್ಟಕ್ಕೆ 375 ರನ್ ಗಳಿಸಿತು. ಕರುಣ್ ತನ್ನ 295 ಎಸೆತಗಳ ಇನಿಂಗ್ಸ್ನಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ಗಳನ್ನು ಸಿಡಿಸಿದ್ದು, ಈ ವರ್ಷದ ದೇಶಿ ಋತುವಿನಲ್ಲಿ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ತನ್ನ 9ನೇ ಶತಕವನ್ನು ಸಿಡಿಸಿದ್ದಾರೆ. ವಿದರ್ಭ ಪರ ದರ್ಶನ್ ನಾಲ್ಕಾಂಡೆ(51 ರನ್, 98 ಎಸೆತ)ಅರ್ಧಶತಕ ಗಳಿಸಿದರು.
ಕೇರಳದ ಪರ ಆದಿತ್ಯ ಸರ್ವಾಟೆ(4-96)ಯಶಸ್ವಿ ಪ್ರದರ್ಶನ ನೀಡಿದರು.
ಎರಡೂ ಇನಿಂಗ್ಸ್ಗಳಲ್ಲಿ 153 ಹಾಗೂ 73 ರನ್ ಗಳಿಸಿದ್ದ ವಿದರ್ಭ ಬ್ಯಾಟರ್ ದಾನಿಶ್ ಮಾಲೆಮಾರ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಒಟ್ಟು 476 ರನ್ ಗಳಿಸಿದ್ದಲ್ಲದೆ 69 ವಿಕೆಟ್ಗಳನ್ನು ಉರುಳಿಸಿದ್ದ ವಿದರ್ಭದ ಹರ್ಷ ದುಬೆ ‘ಸರಣಿಶ್ರೇಷ್ಠ’ ಪ್ರಶಸ್ತಿ ಸ್ವೀಕರಿಸಿದರು.
ಸಂಕ್ಷಿಪ್ತ ಸ್ಕೋರ್
ವಿದರ್ಭ ಮೊದಲ ಇನಿಂಗ್ಸ್: 379 ರನ್
ಕೇರಳ ಮೊದಲ ಇನಿಂಗ್ಸ್: 342 ರನ್
ವಿದರ್ಭ ಎರಡನೇ ಇನಿಂಗ್ಸ್: 375/9
(ಕರುಣ್ ನಾಯರ್ 135, ದಾನಿಶ್ ಮಾಲೆಮಾರ್ 73, ದರ್ಶನ್ ಔಟಾಗದೆ 51, ಆದಿತ್ಯ ಸರ್ವಾಟೆ 4-96)
ಪಂದ್ಯಶ್ರೇಷ್ಠ: ದಾನಿಶ್ ಮಾಲೆವಾರ್
ಸರಣಿಶ್ರೇಷ್ಠ: ಹರ್ಷ ದುಬೆ.